ದಾವಣಗೆರೆ: ಹರಪನಹಳ್ಳಿ ಪಟ್ಟಣದ ಹೃದಯಭಾಗದಲ್ಲಿ ಸಿಡಿಮದ್ದು ಸ್ಪೋಟಿಸಿ ಕಲ್ಲುಬಂಡೆ ಒಡೆಯುವ ಸಂದರ್ಭದಲ್ಲಿ ಕಲ್ಲು ಗಣಿ ಕಾರ್ಮಿಕನೊಬ್ಬ ತೀವ್ರ ಗಾಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯಲ್ಲಿ ತಮಿಳುನಾಡು ಮೂಲದ ಪಟ್ಟಣದ ಸಂಡೂರುಗೇರಿ ನಿವಾಸಿ ರವಿ (43) ತನ್ನ ಮುಂಗೈಗೆ ಪೆಟ್ಟು ಬಿದ್ದು ಎರಡು ಬೆರಳು ಕಳೆದುಕೊಂಡು, ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಈ ಕುರಿತು ಪೊಲೀಸ್ ಸಾರ್ವಜನಿಕರ ಒತ್ತಡಕ್ಕೆ ಮಣಿದು ತಡವಾಗಿ ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.
ಪಟ್ಟಣದ ಗೋಕರ್ಣೇಶ್ವರ ದೇವಸ್ಥಾನದ ಕೂಗಳತೆ ದೂರದಲ್ಲಿರುವ ಬಿ.ಸಿ.ವೀರಣ್ಣ ಮತ್ತವರ ಸಂಬಂಧಿಗಳಿಗೆ ಸೇರಿದ ಜಂಟಿ ಖಾತೆಯಲ್ಲಿರುವ ಸರ್ವೆ ನಂಬರ್ 556/ಬಿ3 ಗೆ ಸೇರಿರುವ 0.57 ಸೆಂಟ್ಸ್ ಜಾಗದಲ್ಲಿ ಕಟ್ಟಡ ಕಾಮಗಾರಿ ಜರುಗಿದ್ದು, ಬುನಾದಿ ತೆಗೆಯುವಾಗ ಕಂಡುಬಂದ ಬೃಹತ್ ಗಾತ್ರದ ಕಲ್ಲು ಬಂಡೆಗಳನ್ನು ಒಡೆಯಲು ಗಣಿ ಕಾರ್ಮಿಕ ರವಿ ಮೂಲಕ ಸಿಡಿಮದ್ದು ಸಿಡಿಸಿ ಕಲ್ಲುಬಂಡೆಯನ್ನು ಒಡೆಯಲು ಸ್ಥಳದ ಮಾಲೀಕರು ದುಸ್ಸಾಹಸ ಎಸಗಿದ್ದಾರೆ. ಘಟನೆ ನಡೆದು ಹತ್ತು ಹದಿನೈದು ದಿನ ಕಳೆದರೂ ದರ್ಘಟನೆ ಕುರಿತು ಸ್ಥಳೀಯ ಸಂಸ್ಥೆಗಳಾಗಲಿ, ಕಾರ್ಮಿಕ ಹಾಗೂ ಪೊಲೀಸ್ ಇಲಾಖೆಯಾಗಲಿ ಇದುವರೆಗೂ ಸ್ವಯಂಪ್ರೇರಿತ ದೂರು ದಾಖಲಾಗಿರಲಿಲ್ಲ.
ರಾಜಕೀಯ ಒತ್ತಡವೋ ಅಥವಾ ಸಮಾಜದಲ್ಲಿ ಬಲಿಷ್ಠರೋ ಅನ್ನುವ ಕಾರಣಕ್ಕೆ ಅಧಿಕಾರಿಗಳು ದೂರು ದಾಖಲಿಸಲು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಬಸ್ ನಿಲ್ದಾಣದ ಸಮೀಪದ ಖಾಲಿ ಜಾಗದಲ್ಲಿ ಸಿಡಿಮದ್ದು ಸಿಡಿದು ಕಾರ್ಮಿಕ ಕೈಬೆರೆಳು ಕಳದುಕೊಂಡಿರುವ ದುರ್ಘಟನೆ ನಡೆದಿದ್ದರು ಸಮೀಪದಲ್ಲಿಯೇ ಇರುವ ಪುರಸಭೆ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳು ಇದುವರೆಗೂ ಕ್ರಮ ಕೈಗೊಂಡಿರಲಿಲ್ಲ. ಯಾವಾಗ ಸಾರ್ವಜನಿಕ ವಲಯದಿಂದ ಪ್ರಕರಣದ ತನಿಖೆಗಾಗಿ ಒತ್ತಡ ಆರಂಭವಾಯಿತೋ, ಕಾರ್ಮಿಕ ಇಲಾಖೆ, ಪುರಸಭೆ ಹಾಗೂ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಧಾವಿಸಿ ಮಹಜರು ಮಾಡಿದ್ದಾರೆ. ಬಾಂಬ್ ನಿಷ್ಕ್ರೀಯ ದಳ ಕೂಡ ಸ್ಥಳಕ್ಕೆ ಆಗಮಿಸಿ ಸಿಡಿಮದ್ದು ಸಿಡಿಸಿ ಕಲ್ಲು ಒಡೆದ ಅವಶೇಷಗಳನ್ನು ಸಂಗ್ರಹಿಸಿ ಎಫ್.ಎಸ್.ಎಲ್ ಟೆಸ್ಟಿಗೆ ಕಳುಹಿಸಲು ಮುಂದಾಗಿದೆ.
ಬಂಡೆಗಳ ಸ್ಪೋಟಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ಪಡೆಯಬೇಕಿತ್ತು. ಈ ಸಂಬಂಧ ಕಾರ್ಮಿಕ ಇಲಾಖೆ, ಪುರಸಭೆ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಕೂಡಲೇ ಅಧಿಕಾರಿಗಳು ಸ್ವಯಂ ಪ್ರೇರಿತರಾಗಿ ಸಂಬಂಧಪಟ್ಟ ಜಾಗದ ಮಾಲಿಕರ ವಿರುದ್ದ ಕ್ರಮ ಜರುಗಿಸಿ, ಸ್ಥಳದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಬೇಕು, ಮತ್ತು ಸಿಡಿ ಮದ್ದು ಸ್ಫೋಟ ಕೃತ್ಯದ ಕುರಿತು ಪ್ರಕರಣ ದಾಖಲಿಸಿಕೊಂಡು, ಕೈ ಬೆರೆಳು ಕಳೆದುಕೊಂಡು ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕನಿಗೆ ಸೂಕ್ತ ಪರಿಹಾರ ದೊರಕಿಸಬೇಕೆಂದು ಎಂದು ಹರಪನಹಳ್ಳಿಯ ಪ್ರಗತಿಪರ ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.