ಬೆಂಗಳೂರು; ನಕಲಿ ದಾಖಲಿ ಸೃಷ್ಟಿಸಿ ವಿಲಾಸಿ ವಿಲ್ಲಾ ಹಾಗೂ ವಸತಿ ಸಮುಚ್ಚಯ ನಿರ್ಮಿಸಿಕೊಡುವುದಾಗಿ ಸಾರ್ವಜನಿಕರಿಗೆ ವಂಚನೆ ಮಾಡಿ ವಂಚನೆ ಮಾಡಿರುವ ನಿರ್ಮಾಣ್ ಶೆಲ್ಟರ್ ವಿರುದ್ದ ಸಂತ್ರಸ್ತರು ಹೈಕೋರ್ಟ್ ಮೊರೆ ಹೋಗಿದ್ದಾರೆ. ನಿವೇಶನವನ್ನು ನೋಂದಣಿ, ಮಾರಾಟ ಮಾಡದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಚಂದನಗೌಡರ್ ನೇತೃತ್ವದ ನ್ಯಾಯಪೀಠ, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ. ಆನೇಕಲ್ ತಾಲ್ಲೂಕಿನ ಕಲ್ಲುಬಾಳು ಗ್ರಾಮಪಂಚಾಯತ್ ವ್ಯಾಪ್ತಿಯ ಸರ್ವೆ ನಂಬರ್ 161 ಮತ್ತು 162 ರಲ್ಲಿ ನಿವೇಶನಗಳ ಮಾರಾಟ, ನೋಂದಣಿ ಮಾಡದಂತೆ ಆದೇಶಿಸಿದೆ.
ಹತ್ತು ವರ್ಷಗಳ ಹಿಂದೆ ಆನೇಕಲ್ ತಾಲ್ಲೂಕಿನ ಕಲ್ಲುಬಾಳು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಮುಕುಂದ್ ಕುಲಕರ್ಣಿ ಎಂಬುವರು ನಿವೇಶನ ಖರೀದಿಗೆ ಮುಂಗಡ ಹಣ ಪಾವತಿಸಿದ್ದರು. ನಿವೇಶವನ್ನು ತನ್ನ ಹೆಸರಿಗೆ ನೋಂದಣಿ ಮಾಡಿಕೊಳ್ಳಲು ಅರ್ಜಿದಾರರು ಖಾತಾ ಪಡೆಯಲು ಗ್ರಾಮ ಪಂಚಾಯತ್ ಗೆ ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿ ಅಲೆದಾಡಿದರೂ ಪ್ರಯೋಜನವಾಗಲಿಲ್ಲ. ಬಳಿಕ ಪಂಚಾಯತ್ ಅಧಿಕಾರಿಗಳು ಇದು ಸಿ.ಎ ನಿವೇಶನ ಜಾಗ ಎಂದು ಹೇಳಿ ಖಾತಾ ಮಾಡಿಕೊಡಲು ನಿರಾಕರಿಸಿದರು.
ಆಗ ತಾವು ವಂಚನೆಗೆ ಒಳಗಾಗಿರುವುದು ತಿಳಿದು ಬಂದ ನಂತರ ಮುಕುಂದ್ ಕುಲಕರ್ಣಿ ಅವರು ನ್ಯಾಯಾಲಯದ ಮೊರೆ ಹೋದರು. ನ್ಯಾಯಪೀಠ ನಿರ್ಮಾಣ್ ಶೆಲ್ಪರ್ಸ್’ ಕಂಪನಿ, ಕಂಪೆನಿಯ ಅಧಿಕೃತ ಸಹಿ ಮಾಡುವ ಜವಾಬ್ದಾರಿ ಹೊಂದಿರುವ ಶಶಿ ಎಸ್ ಪಾಟೀಲ್, ನೋಂದಣಿ ಇಲಾಖೆಯ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಒಳಗೊಂಡಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ. ಮುಂದಿನ ಆದೇಶದವರೆಗೆ ನೋಂದಣಿ ಪ್ರಕ್ರಿಯೆ ನಡೆಸದಂತೆ ಆದೇಶ ನೀಡಿದೆ.
ಅನೇಕಲ್ ತಾಲೂಕಿನ ಜಿಗಣಿ ಬಳಿಯ ಕಲ್ಲುಬಾಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ‘ನಿಸರ್ಗ ಲೇಔಟ್ ನಿರ್ಮಾಣ ಮಾಡಿದ್ದು, ಇಲ್ಲಿ ಬಿ.ಎಂ.ಆರ್.ಡಿ.ಯ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಇಲ್ಲಿ ಸಿ.ಎ. ನಿವೇಶನಗಳ ಹಾಗೂ ಉದ್ಯಾನವನಗಳ ಜಾಗಗಳಲ್ಲಿ ಐಷಾರಾಮಿ ವಿಲ್ಲಾಗಳನ್ನು ನಿರ್ಮಾಣ ಮಾಡಲಾಗಿದೆ. ಜೊತೆಗೆ ಹಲವು ನಿವೇಶನಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಇದೇ ರೀತಿ ಆನೇಕಲ್ ಯೋಜನಾ ಪ್ರಾಧಿಕಾರಕ್ಕೆ ಹಲವು ದೂರುಗಳನ್ನು ಸಲ್ಲಿಸಲಾಗಿದೆ. ಈ ಹಿಂದೆ ಲಕ್ಷ್ಮಿನಾರಾಯಣ ಮತ್ತು ಕಂಪನಿಯ ಮುಖ್ಯಸ್ಥರಾದ ಶಶಿಪಾಟೀಲ್ ವಿರುದ್ಧ ನಿವೃತ್ತ ಎಸಿಪಿ ಲವಕುಮಾರ್ ಎಂಬುವವರಿಗೆ ನಿವೇಶನ ಮಾರಾಟದ ನೆಪದಲ್ಲಿ ವಂಚಿಸಿದ್ದ ಆರೋಪದಲ್ಲಿ ಬೆಂಗಳೂರಿನ ಅಶೋಕ್ ನಗರ ಠಾಣೆಯಲ್ಲಿ ಎಫ್.ಆರ್.ಐ. ದಾಖಲಾಗಿತ್ತು.