ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಜೈಲು ಸೇರಿದ್ದಾರೆ. ಪರಪ್ಪನ ಅಗ್ರಹಾರದಿಂದ ಈಗ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ದರ್ಶನ್ ಜೈಲಿಗೆ ಹೋಗಿರುವುದನ್ನೂ ಸಂಭ್ರಮಿಸುತ್ತಿರುವ ಅಭಿಮಾನಿಗಳಿಗೆ ಇಂದು ಸಂಭ್ರಮಿಸಲು ಮತ್ತೊಂದು ಕಾರಣ ಸಿಕ್ಕಿತ್ತು. ದರ್ಶನ್ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ‘ಕರಿಯ’ಮರು ಬಿಡುಗಡೆ ಆಗಿತ್ತು. ಆದರೆ ಅಭಿಮಾನಿಗಳು ಅತಿರೇಕದ ವರ್ತನೆಯಿಂದ ಸಿನಿಮಾದ ಶೋಗಳನ್ನು ರದ್ದು ಮಾಡಲಾಗಿದೆ.
ಅಭಿಮಾನಿಗಳ ಹುಚ್ಚಾಟ ಮೇರೆ ಮೀರಿದ ಕಾರಣ ಕೊನೆಗೆ ‘ಕರಿಯ’ ಸಿನಿಮಾದ ಶೋಗಳನ್ನು ರದ್ದು ಮಾಡಲಾಗಿದೆ. ಪೊಲೀಸರ ಮನವಿ ಮೇರೆಗೆ ಚಿತ್ರಮಂದಿರದವರು ‘ಕರಿಯ’ ಸಿನಿಮಾದ ಸಂಜೆ ಮತ್ತು ರಾತ್ರಿಯ ಶೋ ರದ್ದು ಮಾಡಲಾಗಿದೆ. ಮತ್ತು ನಾಳೆ ಸಹ ಕೇವಲ ಒಂದು ಶೋ ಮಾತ್ರ ‘ಕರಿಯ’ ಸಿನಿಮಾ ಪ್ರದರ್ಶನಗೊಳ್ಳಲಿದೆ. ಕುಡಿದು ಬರುವ ಅಭಿಮಾನಿಗಳಿಂದ ಅಚಾತುರ್ಯ ನಡೆವ ಸಂಭವ ಇದೆ ಹಾಗೂ ಅವರ ನಿಯಂತ್ರಣವೂ ಸಮಸ್ಯೆ ಆಗಬಹುದೆಂಬ ಕಾರಣಕ್ಕೆ ಸಿನಿಮಾ ಶೋ ಅನ್ನು ರದ್ದು ಮಾಡಿಸಲಾಗಿದೆ. ನಾಳೆ ಪ್ರಸನ್ನ ಚಿತ್ರಮಂದಿರದಲ್ಲಿ ಮೂರು ಶೋ ‘ಕೃಷ್ಣಂ ಪ್ರಣಯ ಸಖಿ’ ಮತ್ತು ಒಂದು ಶೋ ‘ಕರಿಯ’ ಸಿನಿಮಾ ಪ್ರದರ್ಶನ ಕಾಣಲಿದೆ.
ಇನ್ನು ಬಳ್ಳಾರಿಯಲ್ಲಿ ‘ಶಾಸ್ತ್ರಿ’ ಸಿನಿಮಾದ ಮರು ಬಿಡುಗಡೆ ಮಾಡಲಾಗಿತ್ತು. ಆದರೆ ಜನ ಬರದೇ ಇರುವ ಕಾರಣಕ್ಕೆ ಶೋ ರದ್ದು ಮಾಡಲಾಗಿದೆ. ಬಳ್ಳಾರಿಯ ರಾಘವೇಂದ್ರ ಚಿತ್ರಮಂದಿರದಲ್ಲಿ ದರ್ಶನ್ ನಟನೆಯ ‘ಶಾಸ್ತ್ರಿ’ ಸಿನಿಮಾ ಮರು ಬಿಡುಗಡೆ ಮಾಡಲಾಗಿತ್ತು. ಆದರೆ ಬೆಳಿಗಿನ ಶೋಗೆ ಕೇವಲ ನಾಲ್ಕು ಟಿಕೆಟ್ಗಳು ಮಾತ್ರವೇ ಸೇಲ್ ಆಗಿದ್ದವು. ಹಾಗಾಗಿ ಆ ಶೋ ಸೇರಿದಂತೆ ‘ಶಾಸ್ತ್ರಿ’ ಸಿನಿಮಾದ ಇತರೆ ಶೋಗಳನ್ನು ಸಹ ರದ್ದು ಮಾಡಲಾಗಿದೆ.