ರಾಜ್ಯ ಸರ್ಕಾರ ಈಗಲೇ ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ಮಲೆನಾಡು ಮತ್ತು ಕರಾವಳಿ ಭಾಗದ 29 ತಾಲೂಕಿನ ಹಲವು ಕಡೆಗಳಲ್ಲಿ ಕೇರಳದ ವಯನಾಡಿನ ರೀತಿಯಲ್ಲೇ ಭೂಕುಸಿತ ಸಂಭವಿಸುವ ಅಪಾಯವಿದೆ! ಹೌದು, ಮಳೆಗಾಲದ ಸಂದರ್ಭದಲ್ಲಿ ರಾಜ್ಯದ ಹಲವು ಕಡೆಗಳಲ್ಲಿ ಉಂಟಾಗುವ ಭೂಕುಸಿತಕ್ಕೆ ಕಾರಣ ಹಾಗೂ ಅದನ್ನು ತಡೆಯುವ ಸಲುವಾಗಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು 2022ರಲ್ಲಿ ಭೂಕುಸಿತ ನಿರ್ವಹಣೆಗಾಗಿ ಕ್ರಿಯಾಯೋಜನೆ ರೂಪಿಸಿತ್ತು. ಆದರೆ, ಆ ಕ್ರಿಯಾಯೋಜನೆಗೆ ತಕ್ಕಂತೆ ಸರ್ಕಾರ ಈವರೆಗೆ ಸಮರ್ಪಕ ಕ್ರಮ ಕೈಗೊಂಡಿಲ್ಲ. ಹೀಗಾಗಿ 2022ರಲ್ಲಿ ಭಾರೀ ಮಳೆಯಿಂದಾಗಿ ರಾಜ್ಯದ 55 ಕಡೆಗಳಲ್ಲಿ ಭೂಕುಸಿತ ಉಂಟಾಗಿತ್ತು. ಅಲ್ಲದೆ, 2023ರಲ್ಲಿ ಮಳೆ ಪ್ರಮಾಣ ಕುಸಿದ ಕಾರಣ ಕೇವಲ 2 ಕಡೆ ಮಾತ್ರ ಭೂಕುಸಿತವಾಗಿತ್ತು. ಆದರೆ, ಈ ಬಾರಿ ಮಳೆಯ ಪ್ರಮಾಣ ತೀವ್ರವಾಗಿರುವ ಕಾರಣದಿಂದಾಗಿ 16ಕ್ಕೂ ಹೆಚ್ಚಿನ ಕಡೆಗಳಲ್ಲಿ ಗುಡ್ಡ ಮತ್ತು ಭೂಕುಸಿತ ಉಂಟಾಗಿದೆ. ಅಲ್ಲದೆ, ಭೂಕುಸಿತ ನಿರ್ವಹಣೆಗಾಗಿ ರೂಪಿಸಲಾಗಿದ್ದ ರಾಜ್ಯ ಕ್ರಿಯಾಯೋಜನೆಯಲ್ಲಿರು ವಂತೆ ಭೂಕುಸಿತವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ 29 ತಾಲೂಕಿನ ಹಲವೆಡೆ ಭೂಕುಸಿತ ಪ್ರಮಾಣ ಹೆಚ್ಚುವ ಆತಂಕವಿದೆ.
ಭೂಕುಸಿತದ ಭೀತಿ ಇರುವ ಜಿಲ್ಲೆ, ತಾಲೂಕುಗಳು:
- ಉತ್ತರ ಕನ್ನಡ: ಅಂಕೋಲಾ, ಹೊನ್ನಾವರ, ಕಾರವಾರ, ಕುಮಟಾ, ಸಿದ್ದಾಪುರ, ಶಿರಸಿ, ಸೂಪಾ, ಯಲ್ಲಾಪುರ
- ಉಡುಪಿ: ಹೆಬ್ರಿ, ಕಾರ್ಕಳ, ಬೈಂದೂರು, ಕುಂದಾಪುರ ಶಿವಮೊಗ್ಗ: ತೀರ್ಥಹಳ್ಳಿ, ಸಾಗರ, ಹೊಸನಗರ
- ಕೊಡಗು: ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ
- ದಕ್ಷಿಣ ಕನ್ನಡ: ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಕಡಬ, ಸುಳ್ಯಾ, ಪುತ್ತೂರು
- ಚಿಕ್ಕಮಗಳೂರು: ಚಿಕ್ಕಮಗಳೂರು, ಮೂಡಿಗೆರೆ, ಎನ್ ಆರ್ ಪುರ, ಶೃಂಗೇರಿ
- ಹಾಸನ: ಸಕಲೇಶಪುರ