ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅನ್ನು ಹೈಕೋರ್ಟ್ ಬಿಡುಗಡೆ ಮಾಡಿದೆ. ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ರವಿ ಬಿಡುಗಡೆಗೆ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಆದರೆ, ನಾಳೆ ಬೆಳಗಾವಿಯಲ್ಲಿ ಸಚಿವೆ ಹೆಬ್ಬಾಳ್ಕರ್ ಬೆಂಬಲಿಗರಿಂದ ಪ್ರತಿಭಟನೆಗೆ ಕರೆ ನೀಡಲಾಗಿದೆ. ಸಿ.ಟಿ. ರವಿಯನ್ನ ಎಂಎಲ್ಸಿ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.
ಎಂಎಲ್ಸಿ ಸಿ.ಟಿ.ರವಿ ಬಿಡುಗಡೆಗೆ ಹೈಕೋರ್ಟ್ ಆದೇಶಿಸಿದ ಹಿನ್ನೆಲೆ ಬೆಳಗಾವಿಯಲ್ಲಿ ನಾಳೆ ಬೆಳಗ್ಗೆ 11ಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರಿಂದ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಸಿಪಿಎಡ್ ಮೈದಾನದಿಂದ ಡಿಸಿ ಕಚೇರಿವರೆಗೂ ಮೆರವಣಿಗೆ ನಡೆಯಲಿದೆ. ಸದ್ಯ ಎಂಎಲ್ಸಿ ಸ್ಥಾನದಿಂದ ಸಿ.ಟಿ.ರವಿ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.
ಚಿಕ್ಕಮಗಳೂರಿನ ಬಿಜೆಪಿ ಕಚೇರಿ ಮತ್ತು ಸಿ.ಟಿ.ರವಿ ಅವರ ನಿವಾಸದ ಎದುರು ಕಾರ್ಯಕರ್ತರು ಡ್ಯಾನ್ಸ್ ಮಾಡಿ ಖುಷಿ ವ್ಯಕ್ತಪಡಿಸಿದರು. ಸಂಭ್ರಮಾಚರಣೆ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಕ್ಸಮರ ಕೂಡ ನಡೆಯಿತು.
ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಡ್ಯಾನ್ಸ್ ಮಾಡುತ್ತಾ ಕಾರ್ಯಕರ್ತರು ಮೆರವಣಿಗೆ ಸಾಗಿದರು. ಸುಮಾರು 500 ಮೀಟರ್ ದೂರದ ವರೆಗೂ ಕುಣಿದು ಕುಪ್ಪಳಿಸಿದರು.ಸಿ.ಟಿ.ರವಿ ಮನೆ ಮುಂದೆ ನೂರಾರು ಕಾರ್ಯಕರ್ತರು ನೆರೆದಿದ್ದರು. ಬಾಗಿಲಲ್ಲಿ ರವಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದರು.