ಹೆಬ್ಬಾಳದ ಎಸ್ಟೀಮ್ ಮಾಲ್ ನಿಂದ ಸಿಲ್ಕ್ ಬೋರ್ಡ್ ವರೆಗೆ ಸುಮಾರು 18 ಕಿಮೀ ಉದ್ದದ 12,690 ಕೋಟಿ ವೆಚ್ಚದಲ್ಲಿ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲು ಸಚಿವ ಸಂಪುಟ ಸಭೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಇನ್ನು ಬೆಂಗಳೂರಿನಲ್ಲಿ ಪ್ರವಾಸೋದ್ಯಮ ಸೆಳೆಯುವ ನಿಟ್ಟಿನಲ್ಲಿ ಸ್ಕೈ ಡೆಕ್ ನಿರ್ಮಾಣಕ್ಕೂ ಸಂಪುಟ ಒಪ್ಪಿಗೆ ನೀಡಿದೆ. ಪ್ರವಾಸೋದ್ಯಮ ಬೆಳವಣಿಗೆ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. 500 ಕೋಟಿ ಅಂದಾಜಿನಲ್ಲಿ ನಿರ್ಮಾಣ ಮಾಡಲು ಸಂಪುಟ ಅನುಮತಿ ನೀಡಿದೆ. ಸ್ಕೈ ಡೆಕ್ ನಿರ್ಮಾಣದ ಸ್ಥಳ ನಿಗದಿ ಬಗ್ಗೆ ಇನ್ನೂ ನಿರ್ಧಾರ ಕೈಗೊಳ್ಳಲಾಗಿಲ್ಲ.
ಟ್ವಿನ್-ಟ್ಯೂಬ್ ಮೋಡ್ನಲ್ಲಿ ಭೂಗತ ಸುರಂಗದ ಪ್ರಸ್ತಾಪವಾಗಿದೆ. ಆರಂಭದಲ್ಲಿ, 11 ಹೆಚ್ಚಿನ ಸಾಂದ್ರತೆಯ ಕಾರಿಡಾರ್ಗಳನ್ನು ಗುರುತಿಸಲಾಯಿತು ಮತ್ತು 30,000 ಕೋಟಿ ರೂ.ಗಳ ಅಂದಾಜಿನ 191 ಕಿಮೀ ಸುರಂಗ ಮಾರ್ಗವನ್ನು ಯೋಜಿಸಲಾಗಿದ್ದು ಹಂತ ಹಂತವಾಗಿ ಯೋಜನೆ ಅನುಷ್ಠಾನಗೊಳ್ಳಲಿದೆ. ಹೆಬ್ಬಾಳದ ಎಸ್ಟೀಮ್ ಮಾಲ್ ನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ಸುರಂಗ ಮಾರ್ಗ ಮೊದಲ ಹಂತದಲ್ಲಿ ಅನುಷ್ಠಾನಗೊಳ್ಳಲಿದೆ ಎಂದು ಸಚಿವ ಎಚ್.ಕೆ ಪಾಟೀಲ್ ತಿಳಿಸಿದ್ದಾರೆ.
ಯೋಜನೆ ಅನುಷ್ಠಾನಗೊಳಿಸಲು ಯಾವುದೇ ಸಂಸ್ಥೆಯನ್ನು ಅಂತಿಮಗೊಳಿಸಿಲ್ಲ. ಆಡಳಿತಾತ್ಮಕ ಅನುಮೋದನೆಯ ನಂತರ, ವಿವರವಾದ ಯೋಜನಾ ವರದಿಯನ್ನು ತಯಾರಿಸಿ ತಾಂತ್ರಿಕ ಸಮಿತಿಗೆ ಕಳುಹಿಸಲಾಗುವುದು. ನಂತರ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು. ಅದನ್ನು ಮತ್ತೆ ಸಚಿವ ಸಂಪುಟದ ಮುಂದೆ ಇಡಲಾಗುವುದು ಎಂದರು. ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕನಸಿನ ಯೋಜನೆ ಇದಾಗಿದೆ.
ಸ್ಕೈಡೆಕ್ ಯೋಜನೆ ಕುರಿತು ಪಾಟೀಲ್, ಅದರ ಸ್ಥಳದ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು. ನಾವು ಕ್ಯಾಬಿನೆಟ್ ಸಭೆಯಲ್ಲಿ ಸ್ಥಳದ ಬಗ್ಗೆ ಚರ್ಚಿಸಲಿಲ್ಲ. ಸ್ಕೈಡೆಕ್ನ ಡಿಪಿಆರ್ ಸಿದ್ಧವಾಗಿಲ್ಲ ಎಂದು ಅವರು ಹೇಳಿದರು. ರಾಜ್ಯಪಾಲರು ತಮ್ಮ ಮುಂದೆ ಬಾಕಿ ಇರುವ ಪ್ರಕರಣಗಳ ವಿಚಾರಣೆಗೆ ಅನುಮೋದನೆ ನೀಡುವ ಬಗ್ಗೆ ನಿರ್ಧರಿಸಲು “ಸಲಹೆ” ನೀಡಲು ಸಂಪುಟ ನಿರ್ಧರಿಸಿತು. ಅವುಗಳಲ್ಲಿ ಎಚ್ಡಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಜನಾರ್ದನರೆಡ್ಡಿ ಮತ್ತು ಮುರುಗೇಶ್ ನಿರಾಣಿ ಅವರಿಗೆ ಸಂಬಂಧಿಸಿದ ಪ್ರಕರಣಗಳು ಸೇರಿವೆ.