ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಘೀ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲೇ ಸಾಗಿದೆ. ಭಾನುವಾರ 469 ಮಂದಿಗೆ ಡೆಂಘೀ ದೃಢಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 14,223ಕ್ಕೆ ಮುಟ್ಟಿದೆ. ಕಳೆದ 24 ಗಂಟೆಗಳಲ್ಲಿ 3,376 ಮಂದಿಗೆ ಪರೀಕ್ಷೆ ನಡೆಸಿದ್ದು, 469 ಮಂದಿಗೆ ಡೆಂಘೀ ದೃಢಪಟ್ಟಿದೆ. ಈ ಪೈಕಿ 281 ಮಂದಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, 188 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 185 ಮಂದಿ ಸಾಮಾನ್ಯ ವಾರ್ಡ್, 3 ಮಂದಿ ಐಸಿಯು ವಾರ್ಡ್ಗೆ ದಾಖಲಾಗಿದ್ದಾರೆ. ಭಾನುವಾರದ ಪ್ರಕರಣ ಸೇರಿ 3,428 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿದ್ದು, 2,866 ಮಂದಿ ಮನೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. 562 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಈ ಪೈಕಿ 14 ಮಂದಿ ಐಸಿಯುನಲ್ಲಿದ್ದಾರೆ. ಈವರೆಗೆ ವರದಿಯಾಗಿರುವ ಒಟ್ಟು ಪ್ರಕರಣಗಳಲ್ಲಿ 1 ವರ್ಷದೊಳಗಿನ 238 ಮಕ್ಕಳಿಗೆ ಡೆಂಘೀ ದೃಢಪಟ್ಟಿದೆ. ಹೀಗಾಗಿ ಮಕ್ಕಳಿಗೆ ಹಗಲಿನ ವೇಳೆ ಸೊಳ್ಳೆಗಳಿಂದ ರಕ್ಷಣೆ ಕಲ್ಪಿಸಿ ಎಂದು ವೈದ್ಯರು ತಿಳಿಸಿದ್ದಾರೆ.
ಬೆಂಗಳೂರು ನಗರ 3, ಶಿವಮೊಗ್ಗ, ಹಾಸನ ತಲಾ 2, ಮೈಸೂರು, ಹಾವೇರಿ, ಧಾರವಾಡ ತಲಾ ಒಂದೊಂದು ಸಾವಾಗಿದೆ. ಇನ್ನೂ ಕೆಲ ಶಂಕಿತ ಡೆಂಘೀ ಸಾವುಗಳು ವರದಿಯಾಗಿದ್ದು, ಡೆತ್ ಆಡಿಟ್ ಸಮಿತಿಯಿಂದ ದೃಢಪಟ್ಟ ಬಳಿಕವೇ ಅವುಗಳನ್ನು ಡೆಂಘೀ ಸಾವುಗಳಾಗಿ ಪರಿಗಣಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ.