ಪ್ರತಿ ಬಾರಿಯೂ ಕೂಡ ಸ್ಪರ್ಧಾತ್ಮಕ ಪರೀಕ್ಷೆ ನಡೆದಾಗಲು ಸಾಕಷ್ಟು ಅಕ್ರಮಗಳು ನಡೆದು ಅಭ್ಯರ್ಥಿಗಳು ತೊಂದರೆಯನ್ನು ಅನುಭವಿಸುತ್ತಾರೆ. ಇದೀಗಾ ಅಂತಹ ಪರೀಕ್ಷಾ ಅಕ್ರಮಗಳಿಗೆ ಬ್ರೇಕ್ ಹಾಕಲು ಕೆಇಎ ಹೊಸ ಪ್ಲಾನ್ ಮಾಡಿಕೊಂಡಿದೆ. ಕೆಇಎ ನಡೆಸುವ ಪ್ರತಿ ಪರೀಕ್ಷೆಯಲ್ಲಿ ವೆಬ್ ಕಾಸ್ಟಿಂಗ್ ಹಾಗೂ ಎಐ ತಂತ್ರಜ್ಞಾನವನ್ನ ಅಳವಡಿಸಲು ಮುಂದಾಗಿದೆ. ವಿವಿಧ ಹುದ್ದೆಗಳ ನೇಮಕಾತಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಒಂದಲ್ಲ ಒಂದು ಅಕ್ರಮಗಳು ನಡೆದು ಜಗತ್ ಜಾಹೀರಾಗಿ ಅಧಿಕಾರಿಗಳು ತಲೆ ತಗ್ಗಿಸುವಂತಾಗುತ್ತಿತ್ತು.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಈ ವೆಬ್ ಕಾಸ್ಟಿಂಗ್ ಅನ್ನು ಅಳವಡಿಕೆ ಮಾಡಿದ್ದಾಗ ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿಯಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೆ ಇದೀಗ ಕೆಇಎ ವೆಬ್ಕಾಸ್ಟಿಂಗ್ನ್ನು ಪ್ರತಿ ಪರೀಕ್ಷೆಯಲ್ಲೂ ಕೂಡ ಅಳವಡಿಸಲು ಮುಂದಾಗಿದ್ದು ನಿನ್ನೆ ಮೊದಲ ಹಂತವಾಗಿ ಬಿಎಂಟಿಸಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವಿವಿಧ ಹುದ್ದೆಗಳಿಗೆ ನಡೆಸಲಾದ ಪರೀಕ್ಷೆಯಲ್ಲಿ ಅಳವಡಿಸಲಾಗಿತ್ತು. ಇನ್ನೂ ಬೆಂಗಳೂರು, ಕಲ್ಬುರ್ಗಿ, ಧಾರವಾಡ ಮತ್ತು ಬಳ್ಳಾರಿಯ ಒಟ್ಟು 22 ಕೇಂದ್ರಗಳ ಒಟ್ಟು 377 ಕೊಠಡಿಗಳಲ್ಲಿ ಕ್ಯಾಮರಾ ಅಳವಡಿಸಲಾಗಿದ್ದು ಕ್ಯಾಮರಾ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಸಲಾಯಿತು.
ವೆಬ್ಕಾಸ್ಟಿಂಗ್ ಮೂಲಕ ನೇರವಾಗಿ ಪರೀಕ್ಷಾ ಕೊಠಡಿಯಿಂದ ಲೈವ್ ವಿಷ್ಯೂಯಲ್ಗಳು ಕಮಾಂಡ್ ರೂಂನಲ್ಲಿ ವೀಕ್ಷಿಸುವ ಅವಕಾಶವಿದ್ದು ಇದರ ಸಹಾಯದಿಂದ ಶಿಕ್ಷಕರು ಹಾಗೂ ಅಭ್ಯರ್ಥಿಗಳ ಚಲನವಲನಗಳನ್ನ ಒಮ್ಮೆಲೇ ವೀಕ್ಷಿಸಬಹುದು. ಇನ್ನೂ ಎಐ ತಂತ್ರಜ್ಞಾನ ಹಾಗೂ ಫೇಸ್ ರೆಕಾಗ್ನೈಸೆಷನ್ ಕೂಡ ಅಳವಡಿಸಿದ್ದು ಇದರಿಂದ ಅಭ್ಯರ್ಥಿಗಳ ಮುಖ ಹಾಗೂ ಫೋಟೋವನ್ನ ಸ್ಕ್ಯಾನ್ ಮಾಡಲಾಗುತ್ತದೆ. ಇದರಿಂದ ಅಭ್ಯರ್ಥಿಗಳ ಸರಿಯಾದ ಮಾಹಿತಿ ಪಡೆದುಕೊಳ್ಳಲು ಸಹಾಯಕವಾಗುತ್ತದೆ. ಇನ್ನೂ ಈ ವೆಬ್ ಕಾಸ್ಟಿಂಗ್ ಯಾವ ರೀತಿಯಲ್ಲಿ ಕೆಲಸ ಮಾಡುತ್ತೆ ಎಂದು ವೀಕ್ಷಿಸಿ ಮಾಹಿತಿ ಪಡೆದುಕೊಳ್ಳಲು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಕೆಇಎಯ ಕಮಾಂಡ್ ರೂಂಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.