ಉತ್ತರ ಕನ್ನಡ ಜಿಲ್ಲೆಯ ಕುಮಟಾ ಬಳಿ ಅಘನಾಶಿನಿ ನದಿ ಉಕ್ಕಿಹರಿದ ಪರಿಣಾಮ ಮನೆ, ಗದ್ದೆಗಳು ಸಂಪೂರ್ಣ ಜಲಾವೃತವಾಗಿದೆ. ಪಟ್ಟಣ ಜಲದಿಗ್ಧಂಧನಕ್ಕೊಳಗಾಗಿ ಜನಜೀವನ ಅಸ್ತ ವ್ಯಸ್ತಗೊಂಡಿದೆ. ತುಂಗಾ ತೀರದಲ್ಲಿರುವ ಕಪ್ಪೆಶಂಕರ ದೇವಾಲಯ ಮುಳುಗಡೆಯಾಗಿ, ಸಂಧ್ಯಾವಂದನ ಮಂಟಪವೂ ಪ್ರವಾಹದಲ್ಲಿ ಜಲಾವೃತವಾಗಿದೆ. ಅಂಗಡಿ, ಹೋಟೆಲ್, ಮಳಿಗೆಗಳಿಗೂ ನೀರು ನುಗ್ಗಿದೆ. ಇನ್ನು ಶೃಂಗೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ 169 ರ ನೆಮ್ಮಾರು ಸಮೀಪ ತುಂಗಾ ನದಿ ನೀರು ನುಗ್ಗಿ ರಸ್ತೆ ಸಂಚಾರ ಕಡಿತಗೊಂಡಿದೆ.
ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಕಾಣಿಸಿಕೊಂಡಿರುವ ಮುಂಗಾರು ಮಳೆಯಬ್ಬರ ಮಂಗಳವಾರವೂ ಮುಂದುವರಿದಿದೆ. ಭಾರೀ ಮಳೆ, ಪ್ರವಾಹ ಹಾಗೂ ಗುಡ್ಡಕುಸಿತದಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, 2 ಸಾವಿರಕ್ಕೂ ಹೆಚ್ಚು ಮಂದಿಯನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಇನ್ನು ಚಿಕ್ಕಮಗಳೂರಿನ ಶೃಂಗೇರಿ ಪಟ್ಟಣ ತುಂಗಾ ಪ್ರವಾಹದಿಂದಾಗಿ ಜಲದಿಗ್ಧಂಧನಕ್ಕೊಳಗಾಗಿದೆ. ಮೈಸೂರು, ಹಾಸನ, ಯಾದಗಿರಿ, ರಾಯಚೂರು, ಕಲಬುರಗಿ, ಬೀದರ್, ಬೆಳಗಾವಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು ಮಳೆ ವಿಪರೀತವಾಗಲಿದೆ. ಅಷ್ಟೇ ಅಲ್ಲದೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಕೂಡ ಧಾರಾಕಾರ ಮಳೆ ಸುರಿಯಲಿದೆ.
ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಮಂಗಳೂರು-ಮುಂಬೈ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾರಿ ಪ್ರಮಾಣದ ಗುಡ್ಡ ಕುಸಿತ. ಅಘನಾಶಿನಿ, ಗಂಗಾವಳಿ ಸೇರಿ ಹಲವು ನದಿಗಳಲ್ಲಿ ಪ್ರವಾಹಕಾಣಿಸಿಕೊಂಡಿದ್ದು, ಪ್ರಮುಖ ರಸ್ತೆಗಳೆಲ್ಲವೂ ಬಂದ್ ಆಗಿ ಜಿಲ್ಲೆಯ ಕರಾವಳಿ ಭಾಗ ಅಕ್ಷರಶಃ ದ್ವೀಪ ದಂತಾಗಿದೆ. ಕರಾವಳಿಯ ಐದೂ ತಾಲೂಕುಗಳಲ್ಲಿ ಬಹುತೇಕ ಕಡೆ ಜಲಾವೃತ ಪರಿಸ್ಥಿತಿ ಇದ್ದು, ಜನ ಮನೆಯಿಂದ ಹೊರಬರಲಾಗದಂಥ ಸ್ಥಿತಿ ನಿರ್ಮಾಣ ವಾಗಿದೆ. 20ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.
ಹೆದ್ದಾರಿಗಳಲ್ಲಿ ಸಂಚಾರ ಅಸ್ತವ್ಯಸ್ತ: ಭಾರೀ ಮಳೆಗೆ ಜಿಲ್ಲೆಯ ಅಂಕೋಲಾ, ಕಾರವಾರ, ಕುಮಟಾ, ಹೊನ್ನಾವರ ಹಾಗೂ ಭಟ್ಕಳದಲ್ಲಿ ವ್ಯಾಪಕ ಹಾನಿ ಆಗಿದೆ. ಅಂಕೋಲಾ ಬಳಿ ಶಿರೂರಿನಲ್ಲಿ ಕಾರವಾರ- ಮಂಗಳೂರು ಚತುಷ್ಪಥ ಹೆದ್ದಾರಿ, ಕುಮಟಾ-ಹುಬ್ಬಳ್ಳಿ ಹೆದ್ದಾರಿಯ ರಾಗಿಹೊಸಳ್ಳಿ ಬಳಿ, ಹೊನ್ನಾವರ- ಬೆಂಗಳೂರು ಹೆದ್ದಾರಿಯಲ್ಲಿ ವರ್ನಕೆರೆ ಬಳಿ, ಕಾರವಾರ – ಇಳಕಲ್ ಹೆದ್ದಾರಿಯಲ್ಲಿ ಕಡವಾಡ ಮಂದ್ರಾಳಿ ಬಳಿ ಗುಡ್ಡ ಕುಸಿದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಇನ್ನು ಕಾರವಾರ-ಅಂಕೋಲಾ ನಡುವೆ ಅರಗಾ, ಚೆಂಡಿಯಾ ಹಾಗೂ ಅಮದಳ್ಳಿ ಬಳಿ ಚತುಷ್ಪಥ ಹೆದ್ದಾರಿ ಮೇಲೆ ನೀರು ನುಗ್ಗಿ ಸಂಚಾರ ಸ್ಥಗಿತಗೊಂಡಿದೆ. ಜಿಲ್ಲೆಯ ಪ್ರಮುಖ ನದಿಗಳಾದ ಅಘನಾಶಿನಿ, ಗಂಗಾವಳಿ, ಗುಂಡಬಾಳ, ಚಂಡಿಕಾ, ಭಾಸ್ಕರಿ, ಬಡ ಗಣಿ ಮತ್ತಿತರ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ.