ಬೆಂಗಳೂರು: ಸಾಲ ವಸೂಲಿಗಾಗಿ ಗ್ರಾಹಕರಿಗೆ ಕಿರುಕುಳ ನೀಡುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಕರ್ನಾಟಕ ಸರ್ಕಾರ ಕಠಿಣ ಕ್ರಮಗಳನ್ನು ಜಾರಿಗೊಳಿಸಲಿದೆ. “ಕರ್ನಾಟಕ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ-2025″ರ ಅಂತಿಮ ಕರಡನ್ನು ಸೋಮವಾರ ರಾಜ್ಯಪಾಲರ ಕಚೇರಿಗೆ ಸರ್ಕಾರ ಸಲ್ಲಿಸಿದೆ. ಕಿರುಕುಳದಲ್ಲಿ ಭಾಗಿಯಾದವರಿಗೆ ಗರಿಷ್ಠ 10 ವರ್ಷದ ಜೈಲು ಶಿಕ್ಷೆ ಮತ್ತು 5 ಲಕ್ಷ ರೂಪಾಯಿ ದಂಡ ವಿಧಿಸುವಂತೆ ಈ ಆದೇಶದಲ್ಲಿ ಪ್ರಸ್ತಾವಿಸಲಾಗಿದೆ. ಮೊದಲು 3 ವರ್ಷ ಶಿಕ್ಷೆಯನ್ನು ಶಿಫಾರಸು ಮಾಡಿದ್ದರೂ, ಅದನ್ನು ಹೆಚ್ಚಿಸಲಾಗಿದೆ.
ಪ್ರಮುಖ ನಿರ್ಣಯಗಳು:
- ಕಟ್ಟುನಿಟ್ಟು ನೋಂದಣಿ: ರಾಜ್ಯದಲ್ಲಿರುವ ಎಲ್ಲ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸುಗ್ರೀವಾಜ್ಞೆ ಜಾರಿಯಾದ 30 ದಿನಗಳೊಳಗೆ ಜಿಲ್ಲಾ ನೋಂದಣಿ ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ನಿಯಮಗಳನ್ನು ಉಲ್ಲಂಘಿಸಿದರೆ, ಸಂಸ್ಥೆಯ ಲೈಸನ್ಸ್ ರದ್ದು ಮಾಡಲು ಸರ್ಕಾರಕ್ಕೆ ಅಧಿಕಾರ.
- ಸ್ಥಳೀಯ ಕಚೇರಿ ಮತ್ತು ಪಾರದರ್ಶಕತೆ: ಪ್ರತಿ ಸಂಸ್ಥೆ ಸ್ಥಳೀಯ ಕಚೇರಿ ಹೊಂದಿರಬೇಕು. ಗ್ರಾಹಕರಿಗೆ ಸಹಿಯಿರುವ ರಸೀದಿ ನೀಡುವುದು, ಬಡ್ಡಿದರವನ್ನು ಕನ್ನಡದಲ್ಲಿ ಪ್ರದರ್ಶಿಸುವುದು ಕಡ್ಡಾಯ.
- ವ್ಯಾಜ್ಯ ಪರಿಹಾರ: ಗ್ರಾಹಕರು ಮತ್ತು ಸಂಸ್ಥೆಗಳ ನಡುವಿನ ವಿವಾದಗಳನ್ನು ಪರಿಹರಿಸಲು ಓಂಬುಡ್ಸ್ಮನ್ ನೇಮಕ. ಸಾಲಗಾರರು ಕಿರುಕುಳದ ದೂರು ಕೊಟ್ಟರೆ, ಸಂಸ್ಥೆಯ ಲೈಸನ್ಸ್ ರದ್ದು ಮಾಡಿ, ಸಾಲವನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಅವಕಾಶ.
- ಪೊಲೀಸ್ ಕ್ರಮ: ಕಿರುಕುಳದ ದೂರು ಬಂದ ತಕ್ಷಣ ಪೊಲೀಸರು ಕೇಸ್ ದಾಖಲಿಸಬೇಕು. ಜಿಲ್ಲಾಧಿಕಾರಿಗಳು ಮೇಲ್ವಿಚಾರಣೆ ಪ್ರಾಧಿಕಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.
- ಸಿವಿಲ್ ಕೋರ್ಟ್ಗಳಿಗೆ ನಿರ್ಬಂಧ: ಸಾಲ ವಿವಾದ ನ್ಯಾಯಾಲಯದಲ್ಲಿ pendಿ೦ಗ್ ಇದ್ದರೆ, ಸಿವಿಲ್ ಕೋರ್ಟ್ಗಳು ಸಾಲ ವಸೂಲಿ ಅರ್ಜಿಗಳನ್ನು ಪರಿಗಣಿಸಬಾರದು.
ಶಿಕ್ಷೆ ಮತ್ತು ದಂಡ
- ಗರಿಷ್ಠ ಶಿಕ್ಷೆ: 10 ವರ್ಷ ಜೈಲು + 5 ಲಕ್ಷ ರೂ. ದಂಡ (ಕಿರುಕುಳ, ಹಿಂಸೆ, ಆಸ್ತಿ ಜಪ್ತಿ ಮಾಡಿದಲ್ಲಿ).
- ನಿಯಮ ಉಲ್ಲಂಘನೆ: 6 ತಿಂಗಳ ಜೈಲು + 10,000 ರೂ. ದಂಡ (ರಸೀದಿ ನೀಡದಿದ್ದರೆ, ಬಡ್ಡಿದರ ಮರೆಮಾಡಿದರೆ).
- ತ್ರೈಮಾಸಿಕ ವರದಿ: ಸಂಸ್ಥೆಗಳು ಪ್ರತಿ 3 ತಿಂಗಳಿಗೊಮ್ಮೆ ಸಾಲದ ವಿವರಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕು.
ರಾಜ್ಯಪಾಲರು ಸೋಮವಾರ ಹಾಜರಿರಲಿಲ್ಲ. ಮಂಗಳವಾರ ಅಥವಾ ಬುಧವಾರ ಸುಗ್ರೀವಾಜ್ಞೆಗೆ ಸಹಿ ಹಾಕುವ ನಿರೀಕ್ಷೆ. ಸಹಿ ಬಂದ ನಂತರ, ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಕಟ್ಟುನಿಟ್ಟಿನ ನಿಯಮಗಳಿಗೆ ಒಳಪಡಲಿದೆ. ಸರ್ಕಾರದ ಗುರಿ, ಸಾಲಗಾರರನ್ನು ಸುರಕ್ಷಿತವಾಗಿಡುವುದು ಮತ್ತು ಅತಿಯಾದ ಬಡ್ಡಿ, ದಬ್ಬಾಳಿಕೆ ತಡೆಗಟ್ಟುವುದು.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc