ರಾಜ್ಯ ಕಾಂಗ್ರೆಸ್ ಪ್ರಭಾವಿ ನಾಯಕ ಜಮೀರ್ ಅಹ್ಮದ್ ಬಹಿರಂಗ ಪ್ರಚಾರ, ರ್ಯಾಲಿ, ಸಮಾವೇಶಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲವೇಕೆ? ಹೀಗೊಂದು ಪ್ರಶ್ನೆ ದಿಢೀರನೆ ಉದ್ಭವವಾಗಿದೆ. ಏಕೆಂದರೆ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಸಮಾವೇಶ, ರ್ಯಾಲಿಗಳಲ್ಲಿ ಅನಿವಾರ್ಯ ನಾಯಕ ಎನಿಸಿಕೊಂಡಿದ್ದ ಜಮೀರ್ ಅಹ್ಮದ್, ಬಹಿರಂಗವಾಗಿ ಕಾಣಿಸಿಕೊಳ್ಳೋದೇ ಕಡಿಮೆಯಾಗಿದೆ. ಏಕೆ ಎಂದು ನೋಡಿದರೆ ಸಿಗುತ್ತಿರುವ ಉತ್ತರ ವಕ್ಫ್ ನೋಟಿಸ್ ವಿವಾದ.
ಮುಸ್ಲಿಮರು ಹೆಚ್ಚು ಇರುವ ಶಿಗ್ಗಾಂವಿಯಲ್ಲೂ ಜಮೀರ್ ಕಾಣಿಸಿಕೊಳ್ತಿಲ್ಲ. ಪಕ್ಷದಿಂದ ಮುಸ್ಲಿಂ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದ್ದರೂ ಬಹಿರಂಗ ಪ್ರಚಾರ, ಸಮಾವೇಶ, ಭಾಷಣಗಳಿಂದ ದೂರವೇ ಉಳಿದಿದ್ದಾರೆ. ಹಾಗೆಂದು ಜಮೀರ್ ಮಿಸ್ಸಿಂಗ್ ಲೀಡರ್ ಅಲ್ಲ. ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರಚಾರಕ್ಕೆ ಹೋದಾಗ, ಹಳ್ಳಿ ಹಳ್ಳಿಗಳಲ್ಲಿ ಎದುರಾಗುತ್ತಿರುವ ಪ್ರಶ್ನೆ ವಕ್ಫ್ ನೊಟೀಸಿನದ್ದು. ಕೆಲವು ಕಡೆ ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿದೆಯಂತೆ. ಹೀಗಾಗಿ ಜಮೀರ್ ಅಹ್ಮದ್ ಬಹಿರಂಗ ಪ್ರಚಾರಕ್ಕೆ ಬಂದರೆ, ಕ್ಯಾಂಪೇನ್ ಕಷ್ಟವಾಗಲಿದೆ ಎಂದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ನಾಯಕರ ಎದುರು ಮನವಿ ಮಾಡಿದ್ದಾರಂತೆ.
ಹೀಗಾಗಿ ಜಮೀರ್ ತಮ್ಮ ಪ್ರಚಾರವನ್ನು ಸ್ಥಳೀಯ ಮುಸ್ಲಿಂ ಮುಖಂಡರ ಸಭೆಗಳಿಗೆ ಸೀಮಿತಗೊಳಿಸಿದ್ದಾರೆ. ಅಲ್ಲದೆ, ಈ ಸಭೆಗಳೂ ಕೂಡಾ ಕ್ಲೋಸ್ ಡೋರ್ ಮೀಟಿಂಗ್ ಎನ್ನುವುದು ವಿಶೇಷ. ಜಮೀರ್, ಇತ್ತೀಚೆಗೆ ಯಾವುದೇ ಪ್ರೆಸ್ ಮೀಟ್ಗಳಲ್ಲೂ ಕಾಣಿಸಿಕೊಂಡಿಲ್ಲ. ಮಾಧ್ಯಮಗಳ ಎದುರು ಸಿಕ್ಕಾಗ ಏನು ಮಾತನಾಡಿದರೂ, ವಿವಾದಕ್ಕೆ ತಿರುಗುತ್ತದೆ ಎನ್ನುವ ಹಿನ್ನೆಲೆಯಲ್ಲಿ ಜಮೀರ್, ಮೀಡಿಯಾಗಳನ್ನೂ ಅವಾಯ್ಡ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬೈ ಎಲೆಕ್ಷನ್ ಬಹಿರಂಗ ಪ್ರಚಾರ ಇಂದು ಅಂತ್ಯ..!
ಆದರೆ ಶಿಗ್ಗಾಂವಿಯ ಕಾಂಗ್ರೆಸ್ ಮುಖಂಡ ಸೈಯ್ಯದ್ ಅಜ್ಜಂಪೀರ್ ಖಾದ್ರಿ ಹೇಳೋದೇ ಬೇರೆ. ನಾವು ಜಮೀರ್ ಅಹ್ಮದ್ ಅವರಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಜಮೀರ್ ಅಹ್ಮದ್ ಅವರಿಗೆ ವಹಿಸಿರುವ ಹೊಣೆಗಾರಿಕೆಯೇ ಬೇರೆ. ಹೀಗಾಗಿ ಅವರು ಬಹಿರಂಗ ಪ್ರಚಾರಕ್ಕೆ ಬರುತ್ತಿಲ್ಲ. ಅವರು ತಮಗೆ ವಹಿಸಿರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ಧಾರೆ ಎಂದಿದ್ದಾರೆ ಅಜ್ಜಂಪೀರ್ ಖಾದ್ರಿ.
ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣದಲ್ಲಿ ಮುಸಲ್ಮಾನ್ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಶಿಗ್ಗಾಂವಿಯಲ್ಲಿ ಯಾಸಿರ್ ಅಹ್ಮದ್ ಖಾನ್ ಪಠಾಣ ಅವರೇ ಅಭ್ಯರ್ಥಿಯಾಗಿದ್ದಾರೆ. ಈ ಮೂರೂ ಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರು ಯಾರಿಗೆ, ಯಾವ ಪಕ್ಷಕ್ಕೆ ವೋಟ್ ಹಾಕುತ್ತಾರೋ, ಅವರು ಗೆಲ್ಲುತ್ತಾರೆ ಎನ್ನುವುದು ನಿರೀಕ್ಷೆ. ಈ ನಿಟ್ಟಿನಲ್ಲಿ ಸ್ಥಳೀಯ ಮುಸ್ಲಿಂ ಲೀಡರುಗಳ ಮೂಲಕ ಮುಸಲ್ಮಾನ ಮತದಾರರನ್ನು ಒಗ್ಗೂಡಿಸುವ ಕೆಲಸವನ್ನು ಜಮೀರ್ ಅಹ್ಮದ್ ಮಾಡುತ್ತಿದ್ಧಾರೆ. ಆದರೆ ರೈತರಿಗೆ ವಕ್ಫ್ ನೋಟಿಸ್ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಜಮೀರ್ ಅವರ ವೇಗಕ್ಕೆ ಕಡಿವಾಣ ಹಾಕುವಂತೆ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.