ಭಾನುವಾರ ಬೆಳಗ್ಗೆ ಹಾಗೂ ರಾತ್ರಿ ಬೆಂಗಳೂರು ನಗರದಾದ್ಯಂತ ಭಾರಿ ಮಳೆಯಾಗಿದ್ದು, ಸೋಮವಾರ ಮುಂಜಾನೆಯೇ ಗುಡುಗು, ಸಿಡಿಲು ಸಹಿತ ವರ್ಷಧಾರೆಯೇ ಸುರಿದಿದೆ. ಸೋಮವಾರ ಬೆಳ್ಳಂಬೆಳಗ್ಗೆಯೇ ಮೆಜೆಸ್ಟಿಕ್, ಮೈಸೂರು ಬ್ಯಾಂಕ್ ಸರ್ಕಲ್, ವಿಧಾನಸೌಧ, ಶಾಂತಿನಗರ, ಜಯನಗರ, ತ್ಯಾಗರಾಜನಗರ, ಶ್ರೀನಗರ, ಕೆ.ಆರ್.ಮಾರ್ಕೆಟ್, ಟೌನ್ಹಾಲ್, ಕಾರ್ಪೊರೇಷನ್ ಸರ್ಕಲ್, ಮೈಸೂರು ರಸ್ತೆ, ವಿಜಯನಗರ, ಮಾಗಡಿ ರಸ್ತೆ, ರಾಜಾಜಿನಗರ, ಮಲ್ಲೇಶ್ವರ, ಯಶವಂತಪುರ, ಜಾಲಹಳ್ಳಿ, ಪೀಣ್ಯ, ಹೆಬ್ಬಾಳ, ಯಲಹಂಕ, ಬನ್ನೇರುಘಟ್ಟ ರಸ್ತೆ, ಕೆ.ಆರ್.ಪುರಂ, ಟಿನ್ ಫ್ಯಾಕ್ಟರಿ, ಮಹದೇವಪುರ, ಬೆಳ್ಳಂದೂರು, ಮಾರತ್ತಹಳ್ಳಿ, ಕಾಡುಬೀಸನಹಳ್ಳಿ, ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜೆ.ಪಿ.ನಗರ, ಬನಶಂಕರಿ, ಕತ್ರಿಗುಪ್ಪೆ, ಪದ್ಮನಾಭನಗರ, ನಾಯಂಡಹಳ್ಳಿ, ಕೆಂಗೇರಿ, ನಾಗರಬಾವಿ, ಆರ್ಆರ್ ನಗರ, ಗೊರಗುಂಟೆಪಾಳ್ಯ, ನಾಗಸಂದ್ರ, ಪೀಣ್ಯ, ಜಾಲಹಳ್ಳಿ, ಕೋಣನಕುಂಟೆ, ತಲಘಟ್ಟಪುರ ಸೇರಿದಂತೆ ಹಲವೆಡೆ ಭಾರಿ ಮಳೆ ಸುರಿದಿದೆ.
ಮೆಜೆಸ್ಟಿಕ್ ಬಳಿಯ ಓಕಳಿಪುರಂ ಅಂಡರ್ಪಾಸ್ ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಅಂಡರ್ಪಾಸ್ನ ನೀರಿನಲ್ಲಿ ಆಟೋ, ಕಾರು ಸಿಲುಕಿದ ಪರಿಣಾಮ ಓಕಳಿಪುರಂ ಅಂಡರ್ಪಾಸ್ ಬಳಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಮಲ್ಲೇಶ್ವರದಲ್ಲಿ ಪದೇ ಪದೇ ಮರಗಳು ಬೀಳುತ್ತಿದ್ದು, ಭಾನುವಾರ ರಾತ್ರಿ ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿ ಮರವೊಂದು ಉರುಳಿ ಆಲ್ಟೋ ಕಾರು ಜಖಂ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ಬ್ಯಾಟರಾಯನಪುರ ಬಳಿ ಗಾಳಿ ಆಂಜನೇಯ ಸ್ವಾಮಿ ದೇವಾಸ್ಥಾನ ಸಮೀಪ ಭಾರಿ ಮಳೆಗೆ ರಾಜಕಾಲುವೆ ನೀರು ಉಕ್ಕಿ ಹರಿದಿದೆ. ಬಡಾವಣೆಯ ಹಲವು ಮನೆಗಳಿಗೆ 2 ಅಡಿಯಷ್ಟು ನೀರು ನುಗ್ಗಿ ನಿವಾಸಿಗಳು ರಾತ್ರಿಯೆಲ್ಲ ಜಾಗರಣೆ ಮಾಡುವಂತಾಗಿದೆ.
ಸಿಲ್ಕ್ಬೋರ್ಡ್ ಜಂಕ್ಷನ್ನಲ್ಲೂ ಸಾಲು ಸಾಲು ತಾಪತ್ರಯ ತಲೆದೋರಿದೆ. ಪ್ರಮುಖ ರಸ್ತೆಗಳು ನದಿಯಂತಾಗಿದ್ದು, ವಾಹನಗಳು ತೇಲಿಕೊಂಡು ಹೋಗುವಷ್ಟು ರಭಸವಾಗಿ ನೀರು ಹರಿದಿದೆ.