ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರೂಪಿಸಲಾಗಿದ್ದ ಪ್ರವಾಸೋದ್ಯಮ ನೀತಿ 2020-25ರ ಅವಧಿ ಈ ವರ್ಷದ ಅಂತ್ಯಕ್ಕೆ ಮುಕ್ತಾಯವಾಗುತ್ತಿದ್ದು, ಮುಂದಿನ ವರ್ಷಕ್ಕೆ ಹೊಸ ಪ್ರವಾಸಿ ನೀತಿ ರೂಪಿಸಲಾಗುತ್ತಿದೆ. ಪ್ರವಾಸಿ ತಾಣಗಳಲ್ಲಿ ಸ್ಟಾರ್ಹೋಟೆಲ್, ದರ್ಶಿನಿ ನಿರ್ಮಾಣ, ಕ್ರೂಸ್ಶಿಪ್ ಸಂಚಾರ ಸೇರಿದಂತೆ ಪ್ರವಾಸಿ ತಾಣಗಳ ಅಭಿವೃದ್ಧಿ, ಪ್ರವಾಸಿಗರಿಗೆ ಸೂಕ್ತ ಸೌಲಭ್ಯ ಕಲ್ಪಿಸುವಂತಹ 2025-2030ನೇ ಸಾಲಿನ ನೀತಿಯ ಕರಡು ಸಿದ್ಧಪಡಿಸಲಾಗಿದೆ. ಇದಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಪ್ರಕಟಿಸಲು ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ.
ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ ಈಗಾಗಲೇ ಹಲವು ಸಭೆಗಳನ್ನು ನಡೆಸಿ ಪ್ರವಾಸಿತಾಣಗಳ ಅದರಲ್ಲೂ ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವುದು, ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸುವಂತಹ ಅಂಶಗಳನ್ನು ಅಳವಡಿಸಿದ ನೀತಿಯನ್ನು ಸಿದ್ಧಪಡಿಸಲಾಗಿದೆ. ಅದರ ಜತೆಗೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸ್ಟಾರ್ ಹೋಟೆಲ್ಗಳ ನಿರ್ಮಾಣ, ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ ಆಹಾರ ನೀಡುವ ಸಲುವಾಗಿ ದರ್ಶಿನಿ ಮಾದರಿಯ ಹೋಟೆಲ್ಗಳನ್ನು ನಿರ್ಮಿಸುವ ಅಂಶಗಳನ್ನು ನೂತನ ನೀತಿಯಲ್ಲಿ ಅಳವಡಿಸಲಾಗಿದೆ.
ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರ ವಾಸ್ತವ್ಯಕ್ಕೆ ಪ್ರವಾಸೋದ್ಯಮ ಇಲಾಖೆಯಿಂದಲೇ ವ್ಯವಸ್ಥೆ ಮಾಡುವ ಸಲುವಾಗಿ 3 ರಿಂದ 5 ಸ್ಟಾರ್ ಹೊಂದಿರುವ ಬೃಹತ್ ಹೋಟೆಲ್ಗಳ ನಿರ್ಮಾಣದ ಬಗ್ಗೆ ಪ್ರವಾಸಿ ನೀತಿಯಲ್ಲಿ ಉಲ್ಲೇಖಿಸಲಾಗುತ್ತಿದೆ. ಮೈಸೂರು, ಹಾಸನ, ಮಂಗಳೂರು, ಜೋಗ ಜಲಪಾತ ಸೇರಿದಂತೆ ಒಟ್ಟು 10 ಕಡೆಗಳಲ್ಲಿ ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ಅಡಿಯಲ್ಲಿ ಸ್ಟಾರ್ ಹೋಟೆಲ್ಗಳ ನಿರ್ಮಾಣ ಮಾಡುವ ಕುರಿತು ನೀತಿಯಲ್ಲಿ ತಿಳಿಸಲಾಗುತ್ತಿದೆ.