ಗೆಜೆಟೆಡ್ ಪ್ರೊಬೇಷನರ್, ಕೆಎಎಸ್ 384 ಹುದ್ದೆಗಳಿಗೆ ನೇಮಕಾತಿಯ ಪೂರ್ವಭಾವಿ ಪರೀಕ್ಷೆ ಮುಂದೂಡುವಂತೆ ಅಭ್ಯರ್ಥಿಗಳು ಮತ್ತು ರಾಜಕೀಯ ನಾಯಕರ ಒತ್ತಾಯದ ನಡುವೆಯೂ ಆಗಸ್ಟ್ 27 ರಂದು ಸುಸೂತ್ರವಾಗಿ ಪರೀಕ್ಷೆ ನಡೆಸಲು ಕರ್ನಾಟಕ ಲೋಕಸೇವಾ ಆಯೋಗ ಭರದ ಸಿದ್ಧತೆ ನಡೆಸಿದೆ. ಪರೀಕ್ಷೆಗೆ ಸಂಬಂಧಿಸಿದ ಪತ್ರಿಕೆಗಳು ಸೇರಿದಂತೆ ಎಲ್ಲಾ ಗೌಪ್ಯ ಸಾಮಗ್ರಿಗಳನ್ನು ಬೆಂಗಳೂರಿನಿಂದ ರಾಜ್ಯದ 29 ಜಿಲ್ಲಾ ಕೇಂದ್ರಗಳಿಗೆ ಬಿಗಿ ಭದ್ರತೆಯಲ್ಲಿ ಈಗಾಗಲೇ ರವಾನಿಸಲಾಗಿದೆ.
ಒಟ್ಟು 564 ಪರೀಕ್ಷಾ ಉಪ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 2.10 ಲಕ್ಷ ಅಭ್ಯ ರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಮೇಲ್ವಿಚಾರಕರು ಸೇರಿದಂತೆ ಯಾವುದೇ ಪರೀಕ್ಷಾ ಸಿಬ್ಬಂದಿ ಮೊಬೈಲ್ ಫೋನ್ ಬಳಕೆ ಮಾಡದಂತೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಅಭ್ಯರ್ಥಿಗಳು 2 ತಾಸು ಮೊದಲೇ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವಂತೆ ಕೆಪಿಎಸ್ಸಿ ಸೂಚನೆ ನೀಡಿದೆ.