ಕಾವೇರಿ ವಿಷಯವಾಗಿ ಮಾತನಾಡಿದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ ಅವರಿಗೆ ಕಿವಿಮಾತನ್ನು ಹೇಳಿದ್ದಾರೆ. ನಾನು ತಮಿಳುನಾಡು ಮುಖ್ಯಮಂತ್ರಿ ಅವರಿಗೆ ಹಾಗೂ ಅಲ್ಲಿನ ರಾಜಕಾರಣಿಗಳಿಗೆ ಹೇಳುವುದಿಷ್ಟೇ. ಈ ಮಾತನ್ನು ನಾನು ಕೇಂದ್ರ ಸಚಿವನಾಗಿ ಹೇಳುತ್ತಿಲ್ಲ. ಕರ್ನಾಟಕದಲ್ಲಿ ಉತ್ತಮ ಮಳೆಯಾಗುತ್ತಿದೆ. ಕಳೆದ ಐದಾರು ದಿನಗಳಿಂದ ಕೆಆರ್ಎಸ್ ಮತ್ತು ಕಬಿನಿ ಜಲಾಶಯಗಳಿಂದ ಪ್ರತೀದಿನ ಎಂಟರಿಂದ ಹತ್ತು ಟಿಎಂಸಿ ನೀರು ನೆರೆರಾಜ್ಯಕ್ಕೆ ಹರಿದುಹೋಗಿದೆ. ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಎಷ್ಟೆಲ್ಲಾ ನೀರು ಹರಿಸಬೇಕಾಗಿತ್ತೋ ಅಷ್ಟೂ ನೀರನ್ನು ಈ ತಿಂಗಳಲ್ಲಿ ಸಂಪೂರ್ಣವಾಗಿ ಹರಿಸಲಾಗಿದೆ. ಕಾವೇರಿ ಜಲ ನಿರ್ವಹಣಾ ಸಮಿತಿ ಮತ್ತು ಪ್ರಾಧಿಕಾರ ಹೇಳಿದ್ದಕ್ಕಿಂತ ಹೆಚ್ಚಿನ ಪ್ರಮಾಣದ ನೀರು ತಮಿಳುನಾಡಿಗೆ ಹೋಗಿದೆ.
ಈ ಹಿನ್ನೆಲೆಯಲ್ಲಿ ನಾನು ತಮಿಳುನಾಡು ಮುಖ್ಯಮಂತ್ರಿಗಳಿಗೆ ಹೇಳುವುದು ಇಷ್ಟೇ. ಸುಖಾಸುಮ್ಮನೆ ಕಾಲು ಕೆರೆದು ಜಗಳಕ್ಕೆ ಬರುವುದಲ್ಲ, ಕರ್ನಾಟಕದ ಬಗ್ಗೆ ನಿಮ್ಮ ನಡವಳಿಕೆಗಳನ್ನು ನೀವು ತಿದ್ದಿಕೊಳ್ಳಿ. ನೀರು ನಿರಂತರವಾಗಿ ಬಂದಾಗ ನಿಮಗಾಗಲಿ ಅಥವಾ ನಿಮ್ಮ ರೈತರಿಗಾಗಲಿ ಕೊರತೆ ಮಾಡಿಲ್ಲ. ಹಲವಾರು ವರ್ಷ ನಿಮಗೆ ಕೊಡಬೇಕಾದ ನೀರಿಗಿಂತ ಮೂರು ಪಟ್ಟು ಹೆಚ್ಚು ನೀರನ್ನು ಕೊಟ್ಟಿದ್ದೇವೆ. ನಾವು ಬಿಟ್ಟ ನೀರೆಲ್ಲವೂ ಸಮುದ್ರಕ್ಕೆ ಹೋಗ್ತಾ ಇರುವುದನ್ನು ನಾವು ಕಾಣುತ್ತಿದ್ದೇವೆ ಎಂದರು ಕೇಂದ್ರ ಸಚಿವರು.
ವ್ಯರ್ಥವಾಗಿ ಸಮುದ್ರಕ್ಕೆ ಸೇರುವ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ, ಎರಡೂ ರಾಜ್ಯಗಳ ರೈತರಿಗೆ ಹಾಗೂ ಕುಡಿಯುವ ನೀರಿಗೆ ಅನುಕೂಲವಾಗುವಂತೆ ಮೇಕೆದಾಟು ಯೋಜನೆ ನಿರ್ಮಾಣ ಆಗಬೇಕಿದೆ. ಅನೇಕ ವರ್ಷಗಳಿಂದ ಈ ಬಗ್ಗೆ ತಮಿಳುನಾಡು ಆಕ್ಷೇಪ ತೆಗೆಯುತ್ತಿದೆ. ಇದರ ಬಗ್ಗೆ ತಮಿಳುನಾಡು ಸರಕಾರ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಕುಮಾರಸ್ವಾಮಿ ಅವರು ಕಿವಿಮಾತು ಹೇಳಿದರು.
ರಾಜ್ಯ ಸರಕಾರದಿಂದ ಚಿಲ್ಲರೆ ರಾಜಕಾರಣ
ನೀರಿನ ವಿಷಯದಲ್ಲಿಯೂ ರಾಜ್ಯ ಕಾಂಗ್ರೆಸ್ ಸರಕಾರ ಚಿಲ್ಲರೆ ರಾಜಕಾರಣ ಮಾಡುತ್ತಿದೆ. ನಾವೆಂದೂ ಚಿಲ್ಲರೆ ರಾಜಕಾರಣ ಮಾಡಿಲ್ಲ. ಅತ್ಯಂತ ಕೆಟ್ಟ ರೀತಿಯಲ್ಲಿ ಕೇಂದ್ರದ ಸಚಿವರನ್ನು ನಡೆಸಿಕೊಳ್ಳುವುದು, ಲಘುವಾಗಿ ಮಾತನಾಡುವುದು ಶೋಭೆಯಲ್ಲ. ಇಂಥ ನಡವಳಿಕೆಯನ್ನು ಪ್ರತಿದಿನವೂ ನಾನು ಕಾಣುತ್ತಿದ್ದೇನೆ. ಮೊದಲು ಇಂಥ ರಾಜಕಾರಣವನ್ನು ನಿಲ್ಲಿಸಿ. ರಾಜ್ಯದ ಅಭಿವೃದ್ಧಿಗೆ ಪೂರಕವಾದ ನಡವಳಿಕೆ ಅಳವಡಿಸಿಕೊಳ್ಳಿ ಎಂದು ಕುಮಾರಸ್ವಾಮಿ ಅವರು ಡಿಕೆಶಿಗೆ ತಿರುಗೇಟು ಕೊಟ್ಟರು.
ಕಾವೇರಿ ಆರತಿಗೆ ಸ್ವಾಗತ
ಗಂಗಾ ಆರತಿ ಮಾದರಿಯಲ್ಲಿಯೇ ಕಾವೇರಿ ಆರತಿ ನೆರೆವೇರಿಸಲಾಗುವುದು ಎಂದು ಡಿಸಿಎಂ ಡಿಕೆಶಿ ಹೇಳಿರುವುದನ್ನು ಸ್ವಾಗತಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ಒಳ್ಳೆಯದೇ. ಬೇಡ ಎಂದವರು ಯಾರು? ಗಂಗಾ ಆರತಿ ಎನ್ನುವುದು ಒಂದು ಪವಿತ್ರವಾದ ಕಾರ್ಯಕ್ರಮ. ಆ ಕಾರ್ಯಕ್ರಮವನ್ನು ಅಳವಳಡಿಸಿಕೊಂಡರಷ್ಟೇ ಸಾಲದು, ಪ್ರತೀ ಕುಟುಂಬಕ್ಕೆ ಬೆಳಕು ನೀಡುವ ರೀತಿಯಲ್ಲಿ ಗಂಗಾ ಆರತಿ ಮಾಡುವುದು ಸೂಕ್ತ. ಅದಕ್ಕೆ ನನ್ನ ಬೆಂಬಲವೂ ಇದೆ. ಇಲ್ಲಿ ಗಂಗಾ ಆರತಿ ಅಂತ ಹೇಳಿ, ಇನ್ನೊಂದೆಡೆ ಭಯಭಕ್ತಿ ಇಲ್ಲದೆ ಜನಗಳ ಜತೆ ಚಲ್ಲಾಟ ಆಡುವುದು ಬೇಡ ಎಂದು ಕುಮಾರಸ್ವಾಮಿ ಅವರು ಹೇಳಿದರು.