ಕೇರಳದ ವಯನಾಡ್ ನಲ್ಲಿ ನಡೆದ ಗುಡ್ಡ ಕುಸಿತದಲ್ಲಿ ಮೃತಪಟ್ಟಿರುವ ಕೆ.ಆರ್.ಪೇಟೆಯ ಕತ್ತರಘಟ್ಟ ಮೂಲದ ಅಜ್ಜಿ-ಮೊಮ್ಮಗ ನಿಹಾಲ್ ಹಾಗೂ ಲೀಲಾವತಿ ಅವರ ಮನೆಗೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು.
ಇದೇ ಕುಟುಂಬದ ಮೂವರು ವಯನಾಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಉತ್ತಮ ಚಿಕಿತ್ಸೆ ನೀಡಲು ಹಾಗೂ ಅಗತ್ಯ ಸಹಕಾರ ನೀಡಿ ಸಮನ್ವಯ ವಹಿಸಲು ಕರ್ನಾಟಕ ಸರ್ಕಾರದಿಂದ ಅಧಿಕಾರಿಗಳ ತಂಡ ವಯನಾಡ್ ಗೆ ತೆರಳಿದ್ದು, ಅವರಿಗೆ ಅಗತ್ಯವಿರುವ ಪ್ರಾಥಮಿಕ ಚಿಕಿತ್ಸೆಯನ್ನು ವಯನಾಡ್ ನಲ್ಲಿ ಒದಗಿಸಿ ಮುಂದಿನ ದಿನಗಳಲ್ಲಿ ಹೆಚ್ಚಿನ ಚಿಕಿತ್ಸೆಯ ಅವಶ್ಯ ಇದ್ದಲ್ಲಿ ಕರ್ನಾಟಕ ಸರ್ಕಾರದಿಂದ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
5 ಲಕ್ಷ ಪರಿಹಾರ ಮೃತರಾದ ಲೀಲಾವತಿ ಅವರಿಗೆ ಸರ್ಕಾರದಿಂದ ₹5 ಲಕ್ಷ ಪರಿಹಾರ ವಿತರಣೆಯನ್ನು ಶೀಘ್ರದಲ್ಲೇ ಮಾಡಲಾಗುವುದು. ನಿಹಾಲ್ ಅವರು ಚಿಕ್ಕ ವಯಸ್ಸಿನ ಹುಡುಗನಾಗಿದ್ದು, ಆವರಿಗೂ ಸಹ ಸಣ್ಣ ಪ್ರಮಾಣದ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
ಸಚಿವರು ಇದೇ ಸಂದರ್ಭದಲ್ಲಿ ಅಂತ್ಯಕ್ರಿಯೆ ಹಾಗೂ ಮುಂತಾದ ಕಾರ್ಯಗಳಿಗೆ ಸಹಾಯವಾಗಲಿ ಎಂದು ವೈಯಕ್ತಿಕವಾಗಿ ಪರಿಹಾರ ನೀಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಉಪಸ್ಥಿತರಿದ್ದರು.