ಬೆಳಗಾವಿಯ ಕಾಂಗ್ರೆಸ್ ಸಮಾವೇಶದ ಘೋಷಣೆಗೆ ಇವತ್ತಿನ ಕಾಂಗ್ರೆಸ್ ವಿರುದ್ಧವಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಂಬೇಡ್ಕರರನ್ನು ಸೋಲಿಸಿ, ಅಪಮಾನ ಮಾಡಿ, ಜೀವಿತಾವಧಿಯಲ್ಲಿ ನೋಯಿಸಿ, ಇವತ್ತು ಅಂಬೇಡ್ಕರರು ನಮ್ಮ ಅಸ್ಮಿತೆ ಎಂಬಂತೆ ಮಾತನಾಡುವುದು ದುರ್ದೈವದ ಸಂಗತಿ ಎಂದು ಆಕ್ಷೇಪಿಸಿದರು.
ಬಾಪೂ ಹೆಸರು ಹೇಳಿಕೊಂಡು ಮಹಾತ್ಮ ಗಾಂಧಿಯವರ ಮನಸ್ಥಿತಿಗೆ ವಿರುದ್ಧವಾಗಿ ನಕಲಿ ಗಾಂಧಿಗಳು ಇವತ್ತು ಕಾಂಗ್ರೆಸ್ಸನ್ನು ನಡೆಸುತ್ತಿದ್ದಾರೆ. ಸಂವಿಧಾನಕ್ಕೆ ದ್ರೋಹ ಬಗೆದು, ಸ್ವಾರ್ಥಕ್ಕಾಗಿ ಸಂವಿಧಾನವನ್ನೇ ಸಂಹಾರ ಮಾಡಿದ್ದ ಕಾಂಗ್ರೆಸ್ ಇವತ್ತು ಸಂವಿಧಾನದ ರಕ್ಷಕರು ನಾವೇ ಎಂದು ಹೇಳಿಕೊಳ್ಳುತ್ತಿದೆ. ಇದು ಕಾಂಗ್ರೆಸ್ಸಿನ ದ್ವಿಮುಖ ನೀತಿಯ ರಾಜಕೀಯ ಎಂದು ದೂರಿದರು.
ಎಐಸಿಸಿ ಅಧ್ಯಕ್ಷರು, ಕರ್ನಾಟಕದಲ್ಲಿ ನಾವೆಲ್ಲ ಮೆಚ್ಚಿಕೊಂಡಿದ್ದ ಮಲ್ಲಿಕಾರ್ಜುನ ಖರ್ಗೆಯವರು ಒಂದು ರೀತಿಯ ಅಟ್ಟಹಾಸ, ಅಹಂಕಾರ, ಜೊತೆಗೆ ಆತ್ಮವಂಚನೆಯ ಮಾತುಗಳನ್ನು ಆಡಿದ್ದಾರೆ. ಪ್ರಧಾನಮಂತ್ರಿ ಮಾನ್ಯ ನರೇಂದ್ರ ಮೋದಿಯವರನ್ನು ಸಂಬೋಧಿಸುವಾಗ ಅವನು, ಇವನು ಎಂಬ ಮಾತನಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ನಮ್ಮ ಧಿಕ್ಕಾರವಿದೆ ಎಂದು ತಿಳಿಸಿದರು.
ಇಷ್ಟು ದಿನಗಳ ದೀರ್ಘ ರಾಜಕಾರಣ ಮಾಡಿದ ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರನ್ನು ನಾವು ನೋಡಿದ ರೀತಿಯೇ ಬೇರೆ. ಈಗ, ಎಐಸಿಸಿ ಅಧ್ಯಕ್ಷರಾದ ನಂತರ ಅವರ ನಾಲಿಗೆಯಲ್ಲಿ ವಿಷ ಬರುವ ಮಾತನಾಡುತ್ತಾರೆ. ಅವರ ನಾಲಿಗೆಗೆ ಯಾಕೆ ವಿಷ ಬಿತ್ತೆಂಬುದು ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿದಿದೆ ಎಂದು ತಿಳಿಸಿದರು.
ಇವರು ಯಾಕೆ ಇವತ್ತು ಬಿಜೆಪಿಯನ್ನು ಕೆಟ್ಟದಾಗಿ ಮಾತನಾಡುತ್ತಾರೆ? ಬಿಜೆಪಿ ನಾಯಕರ ಮೇಲೆ ಸುಳ್ಳುಗಳನ್ನು ಹಬ್ಬಿಸುವ ಕೆಲಸ ಮಾಡುತ್ತಾರೆ? ಇಂಥ ಎತ್ತರಕ್ಕೆ ಹೋದ ನಾಯಕರಿಗೆ ಇದು ಅವಶ್ಯಕತೆ ಇತ್ತೇ ಎಂಬುದು ನನ್ನ ಪ್ರಶ್ನೆ ಎಂದು ತಿಳಿಸಿದರು. ಮಲ್ಲಿಕಾರ್ಜುನ ಖರ್ಗೆಯವರು ಇಂಥ ಕೀಳು ಭಾಷೆ ಬಳಸಿದ್ದನ್ನು ನಾನು ಕಂಡಿರಲಿಲ್ಲ ಎಂದು ನುಡಿದರು.
ಅದೇರೀತಿ ಸಿದ್ದರಾಮಯ್ಯನವರ ಜೊತೆಗೂ ಕೆಲಸ ಮಾಡಿದ್ದೆ. ಅಧಿಕಾರದ ಹಪಾಹಪಿಯಿಂದ ಇವರಿಬ್ಬರೂ ಒಬ್ಬರನ್ನೊಬ್ಬರು ಮೀರಿಸುವ ರೀತಿ ಸುಳ್ಳುಗಳನ್ನು ಹೇಳುತ್ತಿರುವುದು ಮತ್ತು ಮೂದಲಿಸುವುದು ಸರಿಯಾದ ಕ್ರಮವಲ್ಲ ಎಂದು ಆಕ್ಷೇಪಿಸಿದರು.
ಬಿಜೆಪಿಯಲ್ಲಿದೆ ಬೆಂಕಿ, ಬಿರುಗಾಳಿ, ಜನಶಕ್ತಿ
ಖರ್ಗೆಯವರು, ನಾವು ಬೆಂಕಿ ಇದ್ದ ಹಾಗೆ. ಮನಸ್ಸು ಮಾಡಿದರೆ ಸುಟ್ಟು ಹೋಗುತ್ತೀರಿ ಎಂದಿದ್ದಾರೆ. ಇದನ್ನು ಮಹಾತ್ಮ ಗಾಂಧಿಯವರು ಹೇಳಿಕೊಟ್ಟರೇ ಎಂದು ಕೇಳಿದರು. ಮಾನ್ಯ ಖರ್ಗೆಯವರೇ ಒಂದನ್ನು ನೆನಪಿಟ್ಟುಕೊಳ್ಳಿ; ನಿಮಗೆ ನೇರವಾಗಿ ಹೇಳುತ್ತೇನೆ; ಬಿಜೆಪಿಯಲ್ಲಿ ಬೆಂಕಿಯೂ ಇದೆ. ಬಿರುಗಾಳಿಯೂ ಇದೆ. ನೀವು ಬೆಂಕಿ ಹಚ್ಚಿದರೆ ಆರಿಸುವ ಜನಶಕ್ತಿಯೂ ನಮ್ಮಲ್ಲಿದೆ ಎಂದು ಸವಾಲು ಹಾಕಿದರು.
ಯಾವ ವಿಧದಲ್ಲೂ ನೀವು ನಮಗೆ ಸರಿಸಮಾನರಲ್ಲ ಎಂದು ಆಕ್ಷೇಪಿಸಿದರು. ನೀವು ಹಚ್ಚುವ ಬೆಂಕಿ ಈಗಾಗಲೇ ನಿಮ್ಮನ್ನು ಸುಟ್ಟಿದೆ. ಈ ದೇಶದಲ್ಲಿ ಕೇವಲ 3 ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಉಳಿದಿದೆ. ಈ 3 ರಾಜ್ಯಗಳಿಂದಲೂ ಹೊರಕ್ಕೆ ಹೋಗುವ ಪರಿಸ್ಥಿತಿ ಈಗಾಗಲೇ ಬಂದೊದಗುತ್ತದೆ ಎಂದು ತಿಳಿದುಕೊಳ್ಳಿ ಎಂದು ತಿಳಿಸಿದರು.
ನೀವು ಯಾವ ದಲಿತರನ್ನು ಬೆಳೆಸಿದ್ದೀರಿ?
ಕಿತ್ತೂರು ರಾಣಿ ಚನ್ನಮ್ಮನಿಗೆ ಪ್ರಿಯಾಂಕ ಗಾಂಧಿಯನ್ನು ಹೋಲಿಕೆ ಮಾಡಿದ್ದೀರಿ. ಇದು ಯಾರ ಓಲೈಕೆ? ಯಾತಕ್ಕೆ ಮಾಡುತ್ತಿದ್ದೀರಿ? ಎಂದು ಕೇಳಿದರು. ದಲಿತರ ಪರ ಧ್ವನಿ ಎತ್ತಲಾರದ ನೀವು, ನಿಮ್ಮ ಇಡೀ ಜೀವನದಲ್ಲಿ ದಲಿತ ಸಮುದಾಯದ ಪರ ನಿಲ್ಲದ ನೀವು, ಕೇವಲ ನಿಮ್ಮ ಸ್ವಾರ್ಥಕ್ಕಾಗಿ ರಾಜಕಾರಣ ಮಾಡಿದ್ದೀರಿ. ಯಾವ ದಲಿತರನ್ನು ನೀವು ಬೆಳೆಸಿದ್ದೀರಿ ಎಂದು ಪ್ರಶ್ನಿಸಿದರು.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc