ವಿಶ್ವ ಪ್ರಸಿದ್ಧ ಮಧುಗಿರಿ ಏಕಶಿಲಾ ಬೆಟ್ಟ ಪ್ರವಾಸಿಗರ ಮೆಚ್ಚುಗೆಯ ಚಾರಣ ತಾಣ, ಬಹಳ ವರ್ಷಗಳ ಕಾಲ ನೆನೆಗುದಿಗೆ ಬಿದ್ದಿರುವ ಕೇಬಲ್ ಕಾರ್ ಅಳವಡಿಸಲು ರಾಜ್ಯ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಮುತುವರ್ಜಿ ವಹಿಸಿದ್ದು 2025ರ ಜುಲೈ ವೇಳೆಗೆ ಪ್ರವಾಸಿಗರಿಗೆ ಮಧುಗಿರಿ ಬೆಟ್ಟಕ್ಕೆ ಕೇಬಲ್ ಕಾರ್ ಸೌಲಭ್ಯ ಅಳವಡಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಭರವಸೆ ನೀಡಿದರು.
ಬುಧವಾರ ಮಧುಗಿರಿ ತಾಲೂಕಿ ಬಿಜವರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘ ಇವರ ಆಶ್ರಯದಲ್ಲಿ ನಡೆದ ನೂತನ ಗೋದಾಮು ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದರು. ಕೇಬಲ್ ಕಾರ್ ಅಳವಡಿಸುವ ಯೋಜನೆಯನ್ನು ಆದಷ್ಟು ಬೇಗ ಮುಗಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿ ಕೊಡುವಂತೆ ಸಿಎಂ ಸೂಚಿಸಿದ್ದು, ಅದನ್ನು ಕಾರ್ಯಗತಗೊಳಿಸಲು ಸಂಬಧಪಟ್ಟ ಇಲಾಖೆಗಳು ಮುಂದಾಗಿರುವ ಪರಿಣಾಮ ಅತಿ ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಿ 2025ರ ಜುಲೈ ವೇಳೆಗೆ ಕಾಮಗಾರಿ ಪೂರ್ಣ ಗೊಳಿಸುವ ತಯಾರಿ ನಡೆದಿದೆ ಎಂದರು.