ಕೋಲ್ಕತ್ತಾದ ಆರ್ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ ಕೃತ್ಯ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಸಂಗತಿ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಸಿವಿ ಆನಂದ್ ಬೋಸ್ ಅವರು ಗುರುವಾರ ಹೇಳಿದ್ದಾರೆ.
ಆನಂದ್ ಬೋಸ್ ಅವರು ಇಂದು ಮಧ್ಯಾಹ್ನ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಅಲ್ಲಿ ಧರಣಿ ನಿರತ ವೈದ್ಯರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.
“ನಿನ್ನೆ ದುಷ್ಕರ್ಮಿಗಳ ಗುಂಪು ಆರ್ಜಿ ಕಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ನುಗ್ಗಿ ಧ್ವಂಸಗೊಳಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಯುವತಿಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇನ್ನು ಮುಂದೆ ಈ ರಕ್ತಪಾತವನ್ನು ಅನುಮತಿಸಲಾಗುವುದಿಲ್ಲ. ಇದು ನಿಲ್ಲಬೇಕು” ಎಂದು ಬೋಸ್ ಆಸ್ಪತ್ರೆಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
“ನಾನು ನಿಮ್ಮೊಂದಿಗಿದ್ದೇನೆ ಮತ್ತು ಇದಕ್ಕೆ ಪರಿಹಾರ ಕಂಡುಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ನಾನು ನಿಮಗೆ ನ್ಯಾಯದ ಭರವಸೆ ನೀಡುತ್ತೇನೆ” ಎಂದು ಬೋಸ್ ವಿದ್ಯಾರ್ಥಿಗಳಿಗೆ ಹೇಳಿದರು.