ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ)(CPI-M) ನಾಯಕ ಬುದ್ಧದೇವ್ ಭಟ್ಟಾಚಾರ್ಯ ಅವರು ಇಂದು ವಿಧಿವಶರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದ ನಂತರ ಗುರುವಾರ ಬೆಳಿಗ್ಗೆ ತಮ್ಮ ಕೋಲ್ಕತ್ತಾದ ಮನೆಯಲ್ಲಿ ನಿಧನರಾಗಿದ್ದಾರೆ.
ಬಂಗಾಳದಲ್ಲಿ ಎಡಪಕ್ಷದ 34 ವರ್ಷಗಳ ಆಡಳಿತದಲ್ಲಿ, ಭಟ್ಟಾಚಾರ್ಯ ಅವರು 2000 ರಿಂದ 2011 ರವರೆಗೆ ಸತತ 11 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಎರಡನೇ ಮತ್ತು ಕೊನೆಯ ಸಿಪಿಎಂ ಮುಖ್ಯಮಂತ್ರಿಯಾಗಿದ್ದರು. ಭಟ್ಟಾಚಾರ್ಯ ಅವರು 2011 ರ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರ TMC ಪಕ್ಷದ ವಿರುದ್ಧ ಸೋಲುಂಡಿದ್ದರು. ಆ ಮೂಲಕ ರಾಜ್ಯದಲ್ಲಿ ಎಡರಂಗದ 34 ವರ್ಷಗಳ ಆಳ್ವಿಕೆ ಕೊನೆಗೊಂಡಿತು.
ಕ್ಷೀಣಿಸುತ್ತಿರುವ ಆರೋಗ್ಯದಿಂದಾಗಿ ಅವರು ರಾಜಕೀಯ ರಂಗದಿಂದ ದೂರ ಉಳಿದಿದ್ದರು. ಅವರು ಬಹಳ ಸಮಯದಿಂದಲೂ ತಮ್ಮ ಪಾಮ್ ಅವೆನ್ಯೂ ಅಪಾರ್ಟ್ಮೆಂಟ್ನಲ್ಲೇ ಉಳಿದಿದ್ದರು. ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದ ಅವರ ಆರೋಗ್ಯದಲ್ಲಿ ಇಂದು ಭಾರೀ ಏರುಪೇರಾಗಿತ್ತು. ಹೀಗಾಗಿ ಅವರು ಕೊನೆಯುಸಿರೆಳೆದಿದ್ದಾರೆ. ಇನ್ನು ಭಟ್ಟಾಚಾರ್ಯ ಅವರ ಸಾವಿಗೆ ಅನೇಕರು ಕಂಬನಿ ಮಿಡಿದಿದ್ದಾರೆ.