ಗೆಜೆಟೆಡ್ ಪ್ರೊಬೇಷನರ್ ಪೂರ್ವಭಾವಿ ಪ್ರಶ್ನೆಪತ್ರಿಕೆಗಳಲ್ಲಿ ಇಂಗ್ಲೀಷ್ನಿಂದ ಕನ್ನಡಕ್ಕೆ ಮಾಡಲಾಗಿರುವ ಭಾಷಾಂತರವನ್ನು ಭಾಷಾಂತರ ಇಲಾಖೆಯಿಂದ ಕೆಪಿಎಸ್ಸಿಗೆ ನಿಯೋಜಿಸಲಾಗಿರುವ ಭಾಷಾಂತರಕಾರರಿಂದ ಮಾಡಿಸಲಾಗಿದೆ. ಗೂಗಲ್ ಟ್ರಾನ್ಸ್ ಲೇಟ್ ಅಥವಾ ಎಐ ತಂತ್ರಾಂಶದ ನೆರವು ಬಳಸಿಲ್ಲ ಎಂದು ಕೆಪಿಎಸ್ಸಿ ಸ್ಪಷ್ಟನೆ ನೀಡಿದೆ. ತಂತ್ರಾಂಶಗಳನ್ನು ಪ್ರಶ್ನೆಗಳ ಭಾಷಾಂತರ ಕಾರ್ಯಕ್ಕೆ ಬಳಸಲು ಅವಕಾಶವಿಲ್ಲ. ಆದರೂ, ಪ್ರಶ್ನೆಗಳ ಬಗ್ಗೆ ಗೊಂದಲಗಳು ಇದ್ದರೆ ಪ್ರಕಟಿಸಿರುವ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಬಹುದು.
ಈ ಎಲ್ಲಾ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ವಿಷಯ ತಜ್ಞರನ್ನು ಒಳಗೊಂಡ ಸಮಿತಿಯ ಅಭಿಪ್ರಾಯವನ್ನು ಪಡೆದು ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಎಸ್ಸಿ ತಿಳಿಸಿದೆ. ಆದರೆ, ಇಂಗ್ಲೀಷ್ ಮತ್ತು ಕನ್ನಡ ಪ್ರಶ್ನೆಗಳಲ್ಲಿ ತದ್ವಿರುದ್ಧ ಪದಗಳ ಬಳಕೆ, ವಾಸ್ತವಾಂಶಗಳ ತಪ್ಪುಗಳು, ಲೋಪಗಳಿಗೆ ಕಾರಣಗಳು ಏನು ಎಂಬುದರ ಕುರಿತು ಯಾವುದೇ ಸ್ಪಷ್ಟನೆಯನ್ನು ಕೆಪಿಎಸ್ಸಿ ನೀಡಿಲ್ಲ.
ಭಾಷಾಂತರ ಲೋಪಗಳ ಕುರಿತಾಗಿ ಕೆಪಿಎಸ್ಸಿ ಕಾರ್ಯದರ್ಶಿಯವರ ʻಎಕ್ಸ್ʼ ಖಾತೆಯಲ್ಲಿ ಪತ್ರಿಕಾ ಪ್ರಕಟಣೆ ನೀಡಲಾಗಿದೆ. ಆದರೆ, ರಿಪ್ಲೆ ಸೆಕ್ಷನ್ ಆಫ್ ಮಾಡಲಾಗಿದೆ! ಕೆಪಿಎಸ್ಸಿ ವಿರುದ್ದ ಅಭ್ಯರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾವಿರಾರು ಜನರಿಂದ ಪ್ರಶ್ನೆಗಳು ತೂರಿ ಬರುತ್ತಿರುವ ಕಾರಣ ರಿಪ್ಲೆ ಸೆಕ್ಷನ್ ಆಫ್ ಮಾಡಲಾಗಿದೆ.