ತನ್ನ ಎಡವಟ್ಟಿನಿಂದಲ್ಲೇ ಸದಾ ಸುದ್ದಿಯಲ್ಲಿರೋ ಕೆಪಿಎಸ್ ಸಿ, ಈಗ ‘ಕೃಪಾಂಕ’ ವಿಚಾರವಾಗಿ ಸದ್ದು ಮಾಡ್ತಿದೆ. ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಅನ್ನೋ ಹಾಗೇ, KAS ಪೂರ್ವಭಾವಿ ಮರು ಪರೀಕ್ಷೆಯಲ್ಲಿ ಆಗಿದ್ದ ಪ್ರಮಾದಕ್ಕೆ ಗ್ರೇಸ್ ಮಾರ್ಕ್ಸ್ ಮೂಲಕ ಪರಿಹಾರ ಕಂಡುಕೊಂಡಿದೆ. ಹಾಗಾದ್ರೆ ಯಾರಿಗೆಲ್ಲಾ ಸಿಗಲಿದೆ ಗ್ರೇಸ್ ಮಾರ್ಕ್ಸ್..ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್.
ಹೌದು, ರಾಜ್ಯಾದ್ಯಂತ ಭಾನುವಾರ ನಡೆದ ಕೆಎಎಸ್ ಪೂರ್ವಭಾವಿ ಪರೀಕ್ಷೆಯಲ್ಲಿ KPSC ಯು ತನ್ನ ಎಡವಟ್ಟುಗಳ ಸರಮಾಲೆಗಳನ್ನ ಮುಂದುವರೆಸಿತ್ತು. ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಅನೇಕ ಲೋಪದೋಷಗಳ ಜೊತೆಗೆ ಪ್ರಶ್ನೆಗಳನ್ನು ಸೃಷ್ಟಿ ಮಾಡುವಲ್ಲಿಯೂ ಎಡವಿತ್ತು. ಇಂಗ್ಲಿಷಿನಿಂದ ಕನ್ನಡಕ್ಕೆ ಭಾಷಾಂತರಿಸುವಾಗ ಕನ್ನಡದಲ್ಲಿನ ಪ್ರಶ್ನೆಗಳನ್ನ ತಪ್ಪು ತಪ್ಪಾಗಿ ಕೇಳಲಾಗಿತ್ತು. ಇದರಿಂದ ಗೊಂದಲಕ್ಕೀಡಾಗಿದ್ದ ಪರೀಕ್ಷಾರ್ಥಿಗಳು KPSC ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.
ಈಗ ತನ್ನ ತಪ್ಪನ್ನ ಮರೆಮಾಚಿಕೊಳ್ಳಲು.. ಪರೀಕ್ಷಾರ್ಥಿಗಳ ಆಕ್ರೋಶದಿಂದ ಪಾರಾಗಲು, ಗ್ರೇಸ್ ಮಾರ್ಕ್ಸ್ ಮೊರೆ ಹೋಗುವ ಸಾಧ್ಯತೆ ಇದೆ. ಈ ಬಗ್ಗೆ KPSCಯಲ್ಲೇ ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಸರ್ಕಾರದ ಗಮನಕ್ಕೆ ತರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಒಂದು ಸರ್ಕಾರದ ಮಟ್ಟದಲ್ಲೂ ಗ್ರೀನ್ ಸಿಗ್ನಲ್ ಸಿಕ್ಕಿದ್ರೆ ಆದ್ರೆ.. ತಪ್ಪಾದ ಪ್ರಶ್ನೆಗಳಿಗೆ ಗ್ರೇಸ್ ಮಾರ್ಕ್ಸ್ ಕೊಡೋದು ಫಿಕ್ಸ್.
ಕಳೆದ ಭಾರಿ ನಡೆದ ಕೆಎಎಸ್ ಪೂರ್ವಭಾವಿ ಮರುಪರೀಕ್ಷೆಯು ಭಾಷಾಂತರ ಲೋಪದಿಂದಲೇ ರದ್ದಾಗಿತ್ತು. ಆದ್ರೂ ಅದರಿಂದ ಬುದ್ಧಿ ಕಲಿಯದ ಕೆಪಿಎಸ್ಸಿ ಯು ಮತ್ತದೇ ತಪ್ಪನ್ನು ಮಾಡಿತ್ತು. ಕೆಪಿಎಸ್ಸಿ ಯ ಅಧಿಕಾರಿಗಳ ಈ ಬೇಜವಾಬ್ದಾರಿ ನಡೆಗೆ ರಾಜ್ಯಾದ್ಯಂತ ಪರೀಕ್ಷಾರ್ಥಿಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೆ ಮತ್ತೆ ಇಂತಹ ತಪ್ಪುಗಳು ನಡೆಯುತ್ತಿರುವುದರಿಂದ ಮತ್ತೆ ಮತ್ತೆ ಮರುಪರೀಕ್ಷೆ ನಡೆಸಲಂತೂ ಸಾಧ್ಯವಿಲ್ಲ. ಆದ ಕಾರಣ ಅನಿವಾರ್ಯವೆಂಬಂತೆ ಪ್ರಶ್ನೆಪತ್ರಿಕೆಯಲ್ಲಿ ತಪ್ಪಾದ ಪ್ರಶ್ನೆಗಳಿಗೆ ಕೃಪಾಂಕವನ್ನು ನೀಡಲೇಬೇಕಾಗಿದೆ.
ಪರೀಕ್ಷೆಯಲ್ಲಿ ಪದೇ ಪದೇ ಆಗುತ್ತಿರುವ ತಪ್ಪುಗಳಿಗೆ ಪರೀಕ್ಷಾ ನಿಯಂತ್ರಕರೇ ನೇರವಾಗಿ ಹೊಣೆ ಎಂದು ಸ್ವತಃ ಕೆಪಿಎಸ್ಸಿ ಸದಸ್ಯರೇ ಅಸಮಾಧಾನ ಹೊರಹಾಕಿದ್ದಾರೆ. ಇಂತಹ ತಪ್ಪುಗಳಿಂದ ಆಯೋಗಕ್ಕೆ ಕೆಟ್ಟ ಹೆಸರು ಬರುತ್ತಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ತಪ್ಪುಗಳು ಆಗದೇ ಇರಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಆದರೆ ಈ ತಪ್ಪುಗಳಲ್ಲಿ ಆಯೋಗದ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರ ಯಾವುದೇ ಪಾತ್ರವಿಲ್ಲವೆಂದು ಹೇಳಿ ಕೈ ತೊಳೆದುಕೊಂಡಿದ್ದಾರೆ.
ಏನೇ ಆಗಲಿ ಇಂತಹ ಬೇಜವಾಬ್ದಾರಿ ಅಧಿಕಾರಿಗಳ ತಪ್ಪಿನಿಂದ ಎಷ್ಟೋ ಬಡ ಕುಟುಂಬದ ಮಕ್ಕಳು ತಮ್ಮ ಹಣ, ಸಮಯ ಅಷ್ಟೇ ಯಾಕೆ ತಮ್ಮ ಜೀವನವನ್ನೇ ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರವು ಈಗಲಾದರೂ ಎಚ್ಚೆತ್ತುಕೊಂಡು ಇದಕ್ಕೆಲ್ಲಾ ಕಡಿವಾಣ ಹಾಕಿ ಕೆಪಿಎಸ್ಸಿ ಯನ್ನು ಸರಿಯಾದ ಹಳಿಗೆ ತರಬೇಕು ಅನ್ನೋದು ಸಾರ್ವಜನಿಕರ ಆಗ್ರಹ.