ಕೆಪಿಟಿಸಿಎಲ್ ಸ್ಟೇಷನ್ ಪರಿಚಾರಕ ಮತ್ತು ಪವರ್ಮ್ಯಾನ್ ಡಿ ದರ್ಜೆಯ ಹುದ್ದೆಗಳಿಗೆ ಕಡಿಮೆ ವ್ಯಾಸಂಗ ಮಾಡಿದವರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ 10ನೇ ತರಗತಿ ಅಂಕ ಜೇಷ್ಠತೆ ಮತ್ತು ಕಠಿಣ ಕೆಲಸ ಮಾಡಬಲ್ಲ ತೃಪ್ತಿಕರ ದೇಹದಾರ್ಢತೆಯ ಅರ್ಹತೆಯನ್ನು ಅನೇಕ ವರ್ಷಗಳ ಹಿಂದೆ ನಿಗದಿಪಡಿಸಲಾಗಿದೆ. ಈಗಲೂ ಅದನ್ನೇ ಮುಂದುವರೆಸಲಾಗುತ್ತಿದೆಂದು ಕೆಪಿಟಿಸಿಎಲ್ ಮೂಲಗಳು ತಿಳಿಸಿವೆ. ಕೆಪಿಟಿಸಿಎಲ್ ಮತ್ತು ವಿವಿಧ ಎಸ್ಕಾಂಗಳಲ್ಲಿ ಖಾಲಿ ಇರುವ 2000ಕ್ಕೂ ಹೆಚ್ಚು ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಸರ್ಕಾರಿ ನೌಕರಿ ಆಕಾಂಕ್ಷಿಗಳು ರಾಜ್ಯದ ವಿವಿಧೆಡೆ ಪ್ರತಿಭಟನೆ ಮಾಡಿದ್ದಾರೆ.
ಇಂಧನ ಸಚಿವರು, ಸಿಎಂಗೆ ಮನವಿ ಪತ್ರ ನೀಡಿದ್ದಾರೆ. ಕಾನೂನು ಹೋರಾಟಕ್ಕೂ ಚಿಂತನೆ ನಡೆದಿದೆ. ಆದರೆ, ಕೆಪಿಟಿಸಿಎಲ್ ಮಾತ್ರ ಈ ವಿಚಾರದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೇ ಈಗಾಗಲೇ ಹೊರಡಿಸಿರುವ ನೋಟಿಫಿಕೇಷನ್ ಅನುಸಾರ ಮುಂದುವರೆಯಲು ನಿರ್ಧರಿಸಿದೆ. ಸ್ಟೇಷನ್ ಪರಿಚಾರಕ ಮತ್ತು ಪವರ್ಮ್ಯಾನ್ ಹುದ್ದೆಗಳು ಡಿ ದರ್ಜೆಯದ್ದಾಗಿವೆ. ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದರೆ 10ನೇ ತರಗತಿ ಮಾತ್ರವಲ್ಲದೇ ಪದವಿ, ಉನ್ನತ ವ್ಯಾಸಂಗ ಮಾಡಿದವರು ಕೂಡ ಅರ್ಜಿ ಸಲ್ಲಿಸುವ ಸಾಧ್ಯತೆ ಇರುತ್ತದೆ. ಇದರಿಂದ ಕಠಿಣ ಕೆಲಸ ಮಾಡುವ ಶ್ರಮ ಜೀವಿಗಳಿಗೆ ಸರ್ಕಾರಿ ಕೆಲಸದ ಅವಕಾಶಗಳು ಕ್ಷೀಣವಾಗಬಹುದು ಎಂದು ಮೂಲಗಳು ತಿಳಿಸಿವೆ.