- ಕುವೈತ್ನಲ್ಲಿ ಅಗ್ನಿ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದ ವಿಜಯ್ ಕುಮಾರ್
- ವಿಜಯ್ ಕುಮಾರ್ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಇತ್ತೀಚೆಗೆ ಕುವೈತ್ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದ, ಕಲಬುರಗಿಯ ವಿಜಯ್ ಕುಮಾರ್ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಕುವೈತ್ ಅಗ್ನಿ ದುರಂತದಲ್ಲಿ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಸರಸಂಬ ಗ್ರಾಮದ 40 ವರ್ಷದ ವಿಜಯ ಕುಮಾರ್ ಬಿನ್ ಕೊಬ್ಬಣ್ಣ ಪ್ರಸನ್ನ ಸಾವಿಗೀಡಾಗಿದ್ದರು. ಅವರ ಇಡೀ ಕುಟುಂಬ ಆತನ ಮೇಲೆ ಅವಲಂಬಿತರಾಗಿದ್ದರು, ಈ ಹಿನ್ನೆಲೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಐದು ಲಕ್ಷ ರೂ.ಗಳ ಪರಿಹಾರವನ್ನು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಕುವೈತ್ನ ಮಂಗಾಫ್ ಪ್ರದೇಶದ ಬೃಹತ್ ಬಹುಮಹಡಿ ಕಟ್ಟಡದ ಆರನೇ ಅಂತಸ್ತಿನಲ್ಲಿ ನಡೆದ ಅಗ್ನಿ ಅವಘಡದಲ್ಲಿ 47ಕ್ಕೂ ಹೆಚ್ಚು ಭಾರತೀಯರು ಸಜೀವ ದಹನವಾಗಿದ್ದರು. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸರಸಂಬಾ ಗ್ರಾಮದ ವಿಜಯಕುಮಾರ್ ಪ್ರಸನ್ನ (40) ಕೂಡ ಕೊನೆಯುಸಿರೆಳೆದಿದ್ದರು. ವಿಜಯ್ ಕುಮಾರ್ ಕಳೆದ ಎಂಟು ವರ್ಷಗಳಿಂದ ಟ್ರಕ್ ಚಾಲಕರಾಗಿ ಕುವೈತ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.