ದಿಸ್ವಾತಂತ್ರ್ಯ ನವಾದ ಗುರುವಾರ ಸಸ್ಯಕಾಶಿ ಲಾಲ್ ಬಾಗ್ನಲ್ಲಿ ಎಲ್ಲಿ ನೋಡಿದರಲ್ಲಿ ಜನವೋ ಜನ. ಒಂದೇ ದಿನ ಬರೋಬ್ಬರಿ 2.10 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿದ್ದು 92.50 ಲಕ್ಷಕ್ಕೂ ಅಧಿಕ ಶುಲ್ಕ ಸಂಗ್ರಹವಾಗಿರುವುದು ದಾಖಲೆಯಾಗಿದೆ. ಮುಂಜಾನೆ 8ರಿಂದಲೇ ಜನರು ಸಾಗರೋಪಾದಿಯಲ್ಲಿ ಆಗಮಿಸಲು ಪ್ರಾರಂಭಿಸಿದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಾಲಿಡಲು ಜಾಗವಿಲ್ಲದಷ್ಟು ಜನರಿಂದ ಲಾಲ್ಬಾಗ್ ತುಂಬಿಕೊಂಡಿತ್ತು. ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಸಂಸತ್ ಭವನದ ಪ್ರತಿಕೃತಿ ಮುಂದೆ 12 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ, ಗಾಜಿನ ಮನೆಯ ಬಲಭಾಗದಲ್ಲಿ ಅಂಬೇಡ್ಕರ್ ಜನ್ಮ ಸ್ಥಳದ ಸ್ಮಾರಕದ ಮಾದರಿ ಸೇರಿ ಅಂಬೇಡ್ಕರ್ ವಿಷಯಾಧಾರಿತ ವಿವಿಧ ರಚನೆಗಳು ಜನಮನ ಸೂರೆಗೊಂಡಿತು.
ಗಾಜಿನ ಮನೆಯಲ್ಲಿ ಹಲವರು ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗುತಿದ್ದರಿಂದ ನೂಕುನುಗ್ಗಲು ಉಂಟಾಗಿತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ನಾಲ್ಕೂ ಪ್ರವೇಶ ದ್ವಾರಗಳಲ್ಲಿ ಜನದಟ್ಟಣೆ ನಿರ್ಮಾಣವಾಗಿತ್ತು. ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಿದವರೂ ಒಳಹೋಗಲು ಪರದಾಡ ಬೇಕಾಯಿತು.
ಆಗಸ್ಟ್ 8ರಂದು ಫಲಪುಷ್ಪ ಆರಂಭಗೊಂಡು ಆಗಸ್ಟ್ 14 ರವರೆಗೆ ಸಂಗ್ರಹವಾಗಿದ್ದು ಕೇವಲ 1.03 ಕೋಟಿಗಳು ಮಾತ್ರ. ಆದರೆ ಆ.15ರಂದು ಒಂದೇ ದಿನ 92.50 ಲಕ್ಷ ಟಿಕೆಟ್ ಶುಲ್ಕದಿಂದ ಸಂಗ್ರಹವಾಗಿದೆ. ಸುಮಾರು 2.10 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು ವಯಸ್ಕರು 1,28,500 ಮತ್ತು ಮಕ್ಕಳು 81500 ಮಂದಿ ಆಗಮಿಸಿದ್ದರು ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ. ಜಗದೀಶ್ ಅವರು ತಿಳಿಸಿದ್ದಾರೆ.