ಶಿರೂರು ಗುಡ್ಡ ಪ್ರಕರಣದಲ್ಲಿ ಕೋಝಿಕ್ಕೋಡ್ ಮೂಲದ ಅರ್ಜುನ್ ನಾಪತ್ತೆಯಾಗಿದ್ದಾರೆ ಎನ್ನಲಾಗಿತ್ತು. ಲಾರಿ ಚಾಲಕನಾಗಿರುವ ಅರ್ಜುನ್ಗಾಗಿ ಹುಡುಕಾಟವು ನಡೆಯುತ್ತಿದೆ. ಸದ್ಯ ಪೊಲೀಸರು ಗುಡ್ಡ ಕುಸಿತದ ವೇಳೆ ಅರ್ಜುನ್ ಆ ಸ್ಥಳದಲ್ಲಿದ್ದರು ಎಂಬ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದಾರೆ. ಕಾರವಾರ ಎಸ್ಪಿ ಎಂ ನಾರಾಯಣರವರು ಮಾತನಾಡಿದ್ದು, ಶಿರೂರಿನಲ್ಲಿ ಭೂಕುಸಿತದಲ್ಲಿ ಅರ್ಜುನ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಲಾರಿಯ ದೃಶ್ಯಾವಳಿಗಳು ಸಿಕ್ಕಿವೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅರ್ಜುನ್ ಚಲಾಯಿಸುತ್ತಿದ್ದ ಲಾರಿ ಮೇಲೆ ಮಣ್ಣು ಕುಸಿದಿದೆ. ಮಂಗಳವಾರ ಬೆಳಗ್ಗೆ 8:30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಸದ್ಯ ಪೊಲೀಸರಿಗೆ ಸಿಕ್ಕ ದೃಶ್ಯಾವಳಿ ಪ್ರಕಾರ ಅರ್ಜುನ್ ಚಲಾಯಿಸುತ್ತಿದ್ದ ಲಾರಿ ಮಣ್ಣಿನಡಿಯಲ್ಲಿ ಸಿಲುಕಿದೆ ಎನ್ನಲಾಗುತ್ತಿದೆ. 40 ಜನರ ಸೇನಾ ತಂಡ ಅರ್ಜುನ್ ಪತ್ತೆಗಾಗಿ ನಿರಂತರ ಕೆಲಸ ಮಾಡುತ್ತಿದ್ದಾರೆ. ಅರ್ಜುನ್ ಮತ್ತು ಲಾರಿ ಗಂಗಾವಳಿ ನದಿಯ ಕೆಸರು ಮತ್ತು ಮಣ್ಣಿನಡಿಯಲ್ಲಿರಬಹುದೆಂಬ ಸೂಚನೆಯನ್ನು ಸೇನೆ ನೀಡಿದೆ. ಆಧುನಿಕ ರಾಡಾರ್ ವ್ಯವಸ್ಥೆಗಳು ಮತ್ತು ಇಸ್ರೋದ ಉಪಗ್ರಹ ಚಿತ್ರಣಗಳ ಸಹಾಯದಿಂದ ಅರ್ಜುನ್ಗಾಗಿ ಹುಡುಕಾಟ ನಡೆಯುತ್ತಿದೆ. ಇಂದಿಗೆ 8 ದಿನ ಕಳೆದರು 3 ಮೃತದೇಹಗಳಿಗಾಗಿ ಹುಡುಕಾಟ ನಡೆಯುತ್ತಿದೆ.