ಲೋಕಸಭಾ ಚುನಾವಣೆಗೂ ಮುನ್ನ ಬಂದಿದ್ದ ಸಂವಿಧಾನ ಬದಲಾವಣೆ ಹಾಗೂ ಬಿಜೆಪಿ ಸಂವಿಧಾನ ವಿರೋಧಿ ಎಂಬ ಚಿತ್ರಣವನ್ನು ರಾಹುಲ್ ಗಾಂಧಿ ಲೋಕಸಭಾ ಕಲಾಪದಲ್ಲಿಯೂ ಮತ್ತೆ ಮುನ್ನೆಲೆಗೆ ತಂದಿದ್ದಾರೆ. ಇಂದು ಲೋಸಕಭೆಯಲ್ಲಿ ಸಂವಿಧಾನದ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆದಿದೆ. ಚರ್ಚೆಯಲ್ಲಿ ಭಾಗವಹಿಸಿದ ವಿಪಕ್ಷ ನಾಯಕ ರಾಹುಲ್ ಗಾಂಧಿ, ಇಂದು ದೇಶದಲ್ಲಿ ಮನುಸ್ಮೃತಿಯೇ ಸಂವಿಧಾನವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಸಾವರ್ಕರ್ ಮನುಸ್ಮೃತಿಯನ್ನು ಕಾನೂನು ಎಂದಿದ್ದರು ಮತ್ತು ಸಂವಿಧಾನದಲ್ಲಿ ಸ್ವಲ್ಪವೂ ಭಾರತೀಯತೆ ಇಲ್ಲ ಎಂದಿದದ್ದರು. ಆದರೆ ನಮ್ಮ ಸಂವಿಧಾನ ಭಾರತದ ದಾಖಲೆಯಾಗಿದೆ, ಜೀವನದ ಆದರ್ಶವಾಗಿದೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಮಹಾಭಾರತ ಕಾಲದಿಂದಲೂ ಜಾತೀಯತೆ ಈ ದೇಶದಲ್ಲಿ ಇದೆ ಎಂದು ಹೇಳುವ ಮೂಲಕ ಲೋಕಸಭೆ ಚರ್ಚೆಯಲ್ಲಿ ಅದಾನಿ ಹೆಸರು ಪ್ರಸ್ತಾಪಿಸಿದರು ರಾಹುಲ್ ಗಾಂಧಿ, ಹಿಂದೂಸ್ತಾನ್ ಫೋರ್ಟ್ಸ್, ಏರ್ಫೋರ್ಟ್ಸ್, ಡಿಫೆನ್ಸ್, ಕೈಗಾರಿಕೆ ಅದಾನಿಗೆ ನೀಡಿದ್ದೀರಿ ಪ್ರಮಾಣಿಕವಾಗಿ ಕೆಲಸ ಮಾಡುವವರ ಬೆರಳುಗಳನ್ನು ಕತ್ತರಿಸುತ್ತೀರಿ ಎಂದು ಹೇಳಿದರು. ಅಂಬಾನಿ ಅದಾನಿಗೆ ಲಾಭ ಮಾಡಿಕೊಡಲು ರೈತರ ಬೆರಳು ಕತ್ತರಿಸುತ್ತಿದ್ದೀರಿ ಎಂದು ಹೇಳಿದಾಗ ಮಧ್ಯಪ್ರವೇಶಿಸಿದ ಸ್ಪೀಕರ್ ಓಂ ಬಿರ್ಲಾ, ಸಂವಿಧಾನದ ಬಗ್ಗೆ ಮಾತನಾಡಿ ಎಂದು ವಿಷಯಾಂತರಕ್ಕೆ ಬ್ರೇಕ್ ಹಾಕಿದರು.
ಮರಳಿ ಸಂವಿಧಾನದ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ಸಂವಿಧಾನದಲ್ಲಿ ಅಗ್ನಿವೀರ್ ಮಾಡಿ ಎಂದಿಲ್ಲ. ಸಂವಿಧಾನದಲ್ಲಿ ಎಲ್ಲಿಯೂ ಏಕಸ್ವಾಮ್ಯ ಮಾಡಿ ಎಂದು ಹೇಳಿಲ್ಲ, ಸಂವಿಧಾನದಲ್ಲಿ ಯುವಜನತೆಯ ಬೆರಳು ಕತ್ತರಿಸಿ ಎಂದು ಹೇಳಿಲ್ಲ ಎಂದು ಗುಡುಗಿದರು. ನಾನು ಹತ್ರಾಸ್ಗೆ ಭೇಟಿ ನೀಡಿದ್ದೇನೆ. ಅಲ್ಲಿ ಹೆಣ್ಣು ಮಕ್ಕಳ ಮೇಲೆ ಭೀಕರ ದೌರ್ಜನ್ಯ ನಡೆಯುತ್ತಿದೆ. ಅನಾಚಾರಕ್ಕೊಳಗಾದ ಯುವತಿಯ ಅಂತ್ಯಸಂಸ್ಕಾರ ಮಾಡಲು ಕೂಡ ಬಿಟ್ಟಿಲ್ಲ ಎಂದು ರಾಹುಲ್ ಗಾಂಧಿ ಅಬ್ಬರಿಸಿದರು.
ಇನ್ನು ತಮ್ಮ ಮಾತಿನಲ್ಲಿ ಉತ್ತರಪ್ರದೇಶದ ವಿಚಾರವನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿ, ಯುಪಿಯಲ್ಲಿ ಸಂವಿಧಾನ ಜಾರಿಯಾಗಿಲ್ಲ, ಮನುಸ್ಮೃತಿ ಜಾರಿಯಾಗಿದೆ. ಎಂದು ಗುಡುಗಿದ್ದಾರೆ. ಬಿಜೆಪಿಯವರು ಸಂವಿಧಾನದ ಮೇಲೆ ದಾಳಿಯನ್ನು ಮಾಡುತ್ತಿದ್ದಾರೆ. ಸಂಭಾಲ್ನಲ್ಲಿ ಐದು ಜನರಿಗೆ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಇದನ್ನು ಸಂವಿಧಾನದಲ್ಲಿ ಎಲ್ಲಿ ಬರೆದಿದ್ದಾರೆ ಎಂದು ಮೋದಿ ಸರ್ಕಾರದ ವಿರುದ್ದ ಹರಿಹಾಯ್ದರು.