ಕನ್ನಡ ಮಾತನಾಡಲು ಬರುವುದಿಲ್ಲ ಎಂಬ ಕಾರಣಕ್ಕೆ ಸ್ಥಳೀಯ ಆಟೋ ಚಾಲಕರು ಮತ್ತು ಪರಭಾಷಿಕರ ನಡುವೆ ನಡೆದ ಘರ್ಷಣೆಯಿಂದ ಅಸಮಾಧಾನಗೊಂಡಿರುವ ಬೆಂಗಳೂರಿನ ಆಟೋ ಚಾಲಕರೊಬ್ಬರು ಸ್ಥಳೀಯ ಭಾಷೆಯಲ್ಲಿ ಮೂಲಭೂತ ಸಂವಹನಕ್ಕೆ ಸಹಾಯ ಮಾಡಲು ಮುಂದಾಗಿದ್ದಾರೆ. ಲರ್ನ್ ಕನ್ನಡ ವಿತ್ ಆಟೋ ಕನ್ನಡಿಗ ಎಂಬ ವಿಶಿಷ್ಟ ಕಾನ್ಸೆಪ್ಟ್ ಮೂಲಕ ಪರ ಭಾಷಿಗರಿಗೆ ಕೆಲವೊಂದು ಅಗತ್ಯ ಕನ್ನಡ ಪದಗಳನ್ನು ಕಲಿಸುವಂತಹ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಪರ ಭಾಷಿಗರಿಗೆ ಸ್ವಲ್ಪವಾದರೂ ಕನ್ನಡ ಭಾಷೆಯಲ್ಲಿ ಕಲಿಸಲು ಇಲ್ಲೊಬ್ಬ ಆಟೋ ಚಾಲಕ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಕುರಿತ ಪೋಸ್ಟ್ ಒಂದು ಇದೀಗ ಸಖತ್ ವೈರಲ್ ಆಗುತ್ತಿದೆ. ‘ಆಟೋ ಕನ್ನಡಿಗ’ ಪ್ರೊಪೈಲ್ ಮೂಲಕ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಜನಪ್ರಿಯವಾಗಿರುವ ಅಜ್ಜು ಸುಲ್ತಾನ್ ತಮ್ಮ ಪ್ರಯತ್ನದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. “ಕನ್ನಡಿಗರಲ್ಲದವರು ಆಟೋ ಚಾಲಕರೊಂದಿಗೆ ಕನ್ನಡದಲ್ಲಿ ಸಂವಹನ ನಡೆಸಲು ನಾನು ಮಾಡಿದ ಒಂದು ಸಣ್ಣ ಪ್ರಯತ್ನ ವೈರಲ್ ಆಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ” ಎಂದು ಹೇಳಿದರು.
ನಾನು ಆರು ವರ್ಷಗಳಿಂದ ಬೆಂಗಳೂರಿನಲ್ಲಿ ಆಟೋ ಓಡಿಸುತ್ತಿದ್ದೇನೆ ಮತ್ತು ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಮತ್ತು ಮರಾಠಿಯಲ್ಲಿ ಆರಾಮವಾಗಿ ಸಂವಹನ ನಡೆಸಬಲ್ಲೆ. ಆದರೆ, ಹಲವು ಆಟೋ ಚಾಲಕರಿಗೆ ಕನ್ನಡ ಮಾತ್ರ ಗೊತ್ತು. ಇದು ಕರ್ನಾಟಕದ ಭಾಷೆ, ಕನ್ನಡದಲ್ಲಿ ಮಾತನಾಡಬೇಕೆಂದು ನನ್ನಂತಹ ಆಟೋ ಚಾಲಕರು ನಿರೀಕ್ಷಿಸುವುದು ಮೂಲಭೂತ ವಿಷಯವಾಗಿದೆ.
ಇದನ್ನೂ ಓದಿ: ಭಾರೀ ಮಳೆಯಿಂದ ದಿ. ಅಬ್ದುಲ್ ಕಲಾಂ ಸಂಬಂಧಿಕರಿಗೆ ಜಲ ಕಂಟಕ!
ಇಳಕಲ್ ಮೂಲದ ಸುಲ್ತಾನ್ ಅವರು ತಮ್ಮ ಪೋಸ್ಟರ್ ಭಾಷಾ ಸೌಹಾರ್ದತೆಯ ಸೇತುವೆ ಮತ್ತು ಪ್ರಚಾರದಲ್ಲಿ ಒಂದು ಸಣ್ಣ ಹೆಜ್ಜೆಯಾಗಿದೆ ಎಂದು ಹೇಳಿದರು. ಪೋಸ್ಟರ್ ಜೊತೆಗೆ ಕನ್ನಡದಲ್ಲಿ ಪದಗಳನ್ನು ಸರಿಯಾದ ರೀತಿಯಲ್ಲಿ ಹೇಗೆ ಉಚ್ಚರಿಸಬೇಕು ಎಂಬ ವಿಡಿಯೋವನ್ನೂ ಮಾಡಿದ್ದಾರೆ. ಕೆಲವು ಆಟೋ ಯೂನಿಯನ್ಗಳು ಮತ್ತು ಅವರ ಸ್ನೇಹಿತರಾದ ಪರಶುರಾಮ್, ಅರುಣ್, ಮಲ್ಲಿಕಾರ್ಜುನ್ ಮತ್ತು ಸುನೀಲ್ ಆರ್ಯ, ಎಲ್ಲಾ ಆಟೋ ಚಾಲಕರ ಸಹಾಯದಿಂದ, ಆಟೋಗಳಿಗಾಗಿ ಪೋಸ್ಟರ್ ತಯಾರಿಸಿದ್ದಾರೆ.
ಪ್ರತಿ ಪೋಸ್ಟರ್ಗೆ 24 ರೂಪಾಯಿ ವೆಚ್ಚವಾಗಿದೆ ಮತ್ತು ಅವರು ಈಗಾಗಲೇ ತಮ್ಮ ಹಣದಲ್ಲಿ ಆಟೋಗಳಿಗೆ 500 ಪೋಸ್ಟರ್ಗಳನ್ನು ಹಾಕಿದ್ದಾರೆ ಎಂದು ಹೇಳಿದರು. ಇನ್ಸ್ಟಾಗ್ರಾಮ್ನಲ್ಲಿ ಜನಪ್ರಿಯರಾಗಿರುವ ಸುಲ್ತಾನ್ ಅವರು ಹಣ ಗಳಿಸಲು ಕೆಲವು ಪ್ರಚಾರಗಳನ್ನು ಮಾಡುವುದಾಗಿ ಮತ್ತು ಹೆಚ್ಚಿನ ಪೋಸ್ಟರ್ಗಳನ್ನು ಹಾಕುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಯೋಗೇಶ್ವರ್ ರಾಜೀನಾಮೆ ಆಯ್ತು, ನಿಖಿಲ್ ಕುಮಾರಸ್ವಾಮಿ ಫಿಕ್ಸಾ?
ಕೆಲವು ಆಟೋ ಯೂನಿಯನ್ಗಳು ಪೋಸ್ಟರ್ಗಳನ್ನು ಪ್ರಾಯೋಜಿಸಲು ಸಹ ಒಪ್ಪಿಕೊಂಡಿವೆ ಎಂದು ಅವರು ಹೇಳಿದರು. “ನನ್ನ ಆಟೋ ಡ್ಯೂಟಿ ಜೊತೆಗೆ, ನಾನು ಮಧ್ಯಾಹ್ನದ ಹೊತ್ತಿಗೆ ಇಂದಿರಾನಗರ ಮೆಟ್ರೋ ನಿಲ್ದಾಣವನ್ನು ತಲುಪುತ್ತೇನೆ ಮತ್ತು ಪೋಸ್ಟರ್ಗಳನ್ನು ಹಂಚುವುದರಲ್ಲಿ ಸಮಯ ಕಳೆಯುತ್ತೇನೆ” ಎಂದು ಸುಲ್ತಾನ್ ಹೇಳಿದ್ದಾರೆ.
ಮುಂಬರುವ ದಿನಗಳಲ್ಲಿ, ನಗರದಾದ್ಯಂತ ಮೆಟ್ರೋ ನಿಲ್ದಾಣಗಳಲ್ಲಿಈ ಕೆಲಸ ಮಾಡುತ್ತೇನೆ. ಕನ್ನಡ ಭಾಷೆಯನ್ನು ಪ್ರಚಾರ ಮಾಡಲು, ಕ್ಯಾಬ್ಗಳಿಗೆ, ವಿಶೇಷವಾಗಿ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವವರಿಗೆ ಅಭಿಯಾನವನ್ನು ತೆಗೆದುಕೊಳ್ಳಲು ನಾನು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.