ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಅವರಿಗೆ ವಿಧಾನ ಪರಿಷತ್ನ ಬಿಜೆಪಿ ಸದಸ್ಯ ಸಿ.ಟಿ.ರವಿ ತುಚ್ಛ ಪದ ಬಳಸಿ ನಿಂಧಿಸಿದ ಗಂಭೀರ ಆರೋಪವು ಶುಕ್ರವಾರ ವಿಧಾನಸಭೆಯಲ್ಲೂ ಪ್ರಸ್ತಾಪಗೊಂಡು ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ಹಾಗೂ ತೀಕ್ಷ್ಯ ವಾಗ್ವಾದ, ಕೋಲಾಹಲಕ್ಕೆ ಕಾರಣವಾಯಿತು. ಗದ್ದಲದ ನಡುವೆ ಸ್ಪೀಕರ್ ಯು.ಟಿ. ಖಾದರ್ ಪ್ರಕರಣ ವಿಚಾರಣೆಯನ್ನು ಸದನದ ಹಕ್ಕು ಬಾಧ್ಯತಾ ಸಮಿತಿಗೆ ವಹಿಸಿ ರೂಲಿಂಗ್ ನೀಡಿದರು.
ಇತ್ತ ವಿಧಾನ ಪರಿಷತ್ನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಸಿ.ಟಿ.ರವಿ ಅವರು ಆಕ್ಷೇಪಾರ್ಹ ಪದ ಬಳಕೆ ಮಾಡಿರುವುದು ನನಗೆ ಕೇಳಿಸಿಲ್ಲ. ಹೇಳಿಕೆ ಬಗ್ಗೆ ಎಲ್ಲ ಶಾಸಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದಷ್ಟೇ ಹೇಳಿ ಪ್ರಕರಣಕ್ಕೆ ತೆರೆ ಎಳೆದರು. ವಿಧಾನ ಸಭೆಯಲ್ಲಿ ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ ಈ ವಿಷಯ ಪ್ರಸ್ತಾಪಿಸಿ, ವಿಧಾನಸಭೆಯ ಸದಸ್ಯರಾದ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವಾಚ್ಯ ಶಬ್ದಗಳಿಂದ ನಿಂಧಿಸುವ ಮೂಲಕ ಅವರ ಹಕ್ಕುಗಳಿಗೆ ಧಕ್ಕೆ ತಂದಿದ್ದಾರೆ. ಇದು ಅತ್ಯಂತ ದುಃಖಕರ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೇಳುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ ಸದಸ್ಯರು ಈ ವಿಷಯವನ್ನು ಈಗಾಗಲೇ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ರೂಲಿಂಗ್ ಕೊಟ್ಟಿದ್ದಾರೆ. ಹಾಗಾಗಿ ಈ ವಿಷಯವನ್ನು ಇಲ್ಲಿ ಪ್ರಸ್ತಾಪಿಸುವ ಅಗತ್ಯವಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.