ಲೋಕಸಭಾ ಚುನಾವಣೆ ಹಿನ್ನೆಲೆ ಕರ್ನಾಟಕದಲ್ಲಿ ಇದೇ ಏಪ್ರಿಲ್ 26ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಬಲ್ ಸೆಕ್ಯೂರಿಟಿ ಸಿಸ್ಟಮ್ ಅನ್ನು ಅಳವಡಿಕೆ ಮಾಡಲಾಗಿದೆ. ಒಟ್ಟು 7 ಪ್ಯಾರಾ ಮಿಲಿಟರಿ ತುಕಡಿಯನ್ನು ನಿಯೋಜನೆ ಮಾಡಿದ್ದು, ಇನ್ನು 28 ಲೋಕಸಭಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ, ಮತದಾನ ಪ್ರಕ್ರಿಯೆಯ ನಿಯಮಗಳನ್ನು ಸಹ ಚುನಾವಣಾ ಆಯೋಗವು ಪ್ರಕಟಿಸಿದೆ.
ಈ ಬಗ್ಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಎಲ್ಲಾ ಮತಗಟ್ಟೆಯಲ್ಲಿ ಶೇಕಡಾ 100 ವೆಬ್ ಕಾಸ್ಟಿಂಗ್ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಅಕ್ರಮಗಳು ನಡೆಯಬಹುದು. ಈ ಕ್ಷೇತ್ರದಲ್ಲಿ ಪ್ರಭಾವಿ ಎದುರಾಳಿಗಳು ಆಡಳಿತಯಂತ್ರವನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಹೆಚ್ಚಿನ ಭದ್ರತೆ ಹಾಗೂ ಅರೆ ಸೇನಾ ಪಡೆಯನ್ನು ನಿಯೋಜನೆ ಮಾಡುವಂತೆ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ಅವರು ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ರಾಜ್ಯ ಚುನಾವಣಾ ಆಯೋಗವು ಈ ಮನವಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ರವಾನೆ ಮಾಡಿತ್ತು. ಅಲ್ಲಿಂದ ಜಿಲ್ಲಾಧಿಕಾರಿಗೆ ಸೂಚನೆಯನ್ನು ನೀಡಲಾಗಿತ್ತು. ಅದರ ಅನ್ವಯ ಚುನಾವಣಾಧಿಕಾರಿಗಳ ಕೋರಿಕೆಯಂತೆ ಹೆಚ್ಚು ಭದ್ರತೆ ಮಾಡಲಾಗಿದೆ ಎಂದು ಮನೋಜ್ ಕುಮಾರ್ ಮೀನಾ ಹೇಳಿದರು.