ಚೆನ್ನೈ : ಭಾರತದಲ್ಲಿ ಇಂದು ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನ ಆರಂಭವಾಗಿದೆ. ಮೊದಲ ಹಂತದಲ್ಲಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆಯಲಿದೆ. ಮುಂಜಾನೆ 7 ಗಂಟೆಗೆ ವೋಟಿಂಗ್ ಆರಂಭವಾಗಿದೆ. ಸೂಪರ್ಸ್ಟಾರ್ ರಜನಿಕಾಂತ್ ಮತ್ತು ಕಮಲ್ ಹಾಸನ್ ಇಂದು ಚೆನ್ನೈನ ತಮ್ಮ ತಮ್ಮ ಮತಗಟ್ಟೆಗಳಲ್ಲಿ ಮತದಾನ ಮಾಡಿದರು. ನಟ ಧನುಷ್ ಅವರು ಟಿಟಿಕೆ ರಸ್ತೆಯ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಶಾಲೆಯಲ್ಲಿ ಮತ ಚಲಾಯಿಸಿದರು. ನಟ ವಿಜಯ್ ಸೇತುಪತಿ ಕಿಲ್ಪಾಕ್ನ ಚೆನ್ನೈ ಹೈಸ್ಕೂಲ್ನಲ್ಲಿ ಮತದಾನ ಮಾಡಿದರು.
ಸೂಪರ್ಸ್ಟಾರ್ ರಜನಿಕಾಂತ್ ಅವರು ತಮ್ಮ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಟರಾದ ಅಜಿತ್ ಕುಮಾರ್, ಶಿವಕಾರ್ತಿಕೇಯನ್, ಗೌತಮ್ ಕಾರ್ತಿಕ್, ನಿರ್ದೇಶಕರಾದ ಸುಂದರ್ ಸಿ, ವೆಟ್ರಿ ಮಾರನ್ ಮತ್ತು ಶಶಿಕುಮಾರ್ ಮತ್ತು ಇತರರು ಮತ ಚಲಾಯಿಸಿದರು.
ದೇಶಾದ್ಯಂತ ಸಾರ್ವತ್ರಿಕ ಚುನಾವಣೆ ಏಳು ಹಂತಗಳಲ್ಲಿ ನಡೆಯಲಿದ್ದು, ಜೂನ್ 1ರಂದು ಕೊನೆಗೊಳ್ಳಲಿದೆ. ಲೋಕಸಭೆ ಚುನಾವಣೆಯ ಮತಗಳ ಎಣಿಕೆ ಮತ್ತು ಫಲಿತಾಂಶ ಘೋಷಣೆ ಜೂನ್ 4 ರಂದು ನಡೆಯಲಿದೆ. ಇಂದು ಒಟ್ಟು 102 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.