- ಜೂನ್ 4 ರಂದು ಲೋಕಸಭೆ ಚುನಾವಣೆ ಮತ ಎಣಿಕೆ
- ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ ಬಿ.ದಯಾನಂದ
ಬೆಂಗಳೂರು : ಲೋಕಸಭೆ ಚುನಾವಣೆ ಮತ ಎಣಿಕೆ ಹಿನ್ನೆಲೆ ಬೆಂಗಳೂರಿನಲ್ಲಿ ಜೂನ್ 4 ರಂದು ನಗರದ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ, ನಗರ ಪೊಲೀಸ್ ಕಮೀಷನರ್ ಬಿ. ದಯಾನಂದ್ ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಏ 26 ಮತ್ತು ಮೇ 7 ರಂದು ಎರಡು ಹಂತದ ಲೋಕಸಭಾ ಚುನಾವಣೆ ನಡೆದಿತ್ತು. ಹೀಗಾಗಿ ಜೂನ್ 4 ರಂದು ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜು, ವಿಠಲ್ ಮಲ್ಯ ರಸ್ತೆಯ ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಹಾಗೂ ಜಯನಗರದ ಎಸ್.ಎಸ್.ಎಂ.ಆರ್.ವಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.
ಮತ ಎಣಿಕೆ ನಡೆಯುವ ವೇಳೆ ಕೆಲ ಅಹಿತಕರ ಘಟನೆ, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ನಷ್ಟವುಂಟು ಮಾಡುವ ಸಾಧ್ಯತೆಗಳು ಇರುವುದರಿಂದ ಮುನ್ನಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಕಾರಿ ಮಾಡಲಾಗಿದೆ.