ಜಮೀನಿನ ಗಲಾಟೆಗೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರನ್ನು ಜೀವಂತವಾಗಿ ಸಮಾಧಿ ಮಾಡಲು ಮುಂದಾಗಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯ ಹಿನೌಟಾ ಗ್ರಾಮದಲ್ಲಿ ನಡೆದಿದೆ.
ಹಿನೌಟಾ ಗ್ರಾಮದ ನಿವಾಸಿಗಳಾದ ಮಮತಾ ಪಾಂಡೆ ಮತ್ತು ಆಶಾ ಪಾಂಡೆ ಎಂಬ ಇಬ್ಬರನ್ನು ಜೀವಂತ ಸಮಾಧಿ ಮಾಡಲು ದುಷ್ಕರ್ಮಿಗಳು ಮುಂದಾಗಿದ್ದರು. ಇದರಲ್ಲಿನ ಓರ್ವ ಮಹಿಳೆ ಪ್ರಜ್ಞೆ ಕಳೆದುಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ರಸ್ತೆ ಕಾಮಗಾರಿ ಕೆಲಸ ನಡೆಯುತ್ತಿದ್ದು ಇದು ಮಹಿಳೆಯರ ಜಮೀನಿನಲ್ಲಿ ಹಾದು ಹೋಗುತ್ತದೆ. ಹೀಗಾಗಿ ಇದಕ್ಕೆ ಮಹಿಳೆಯರು ಮಣ್ಣು ಹಾಕದಂತೆ ಲಾರಿಯನ್ನು ತಡೆದಿದ್ದಾರೆ. ಅಲ್ಲೇ ಇದ್ದ ವ್ಯಕ್ತಿಗಳು ಇವರನ್ನು ಅಲ್ಲಿಂದ ಕಳುಹಿಸಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಆದರೆ ಇದಕ್ಕೆ ಮಣಿಯದ ಮಹಿಳೆಯರ ಮೇಲೆ ಮಣ್ಣು ಸುರಿಯುವಂತೆ ಲಾರಿ ಡ್ರೈವರ್ಗೆ ದುಷ್ಕರ್ಮಿಗಳು ಹೇಳಿದ್ದಾರೆ. ಅವರು ಹೇಳಿದಂತೆ ಲಾರಿಯಲ್ಲಿದ್ದ ಜಲ್ಲಿಕಲ್ಲು ಮಿಶ್ರಿತ ಮಣ್ಣನ್ನು ಮಹಿಳೆಯರ ಮೇಲೆ ಸುರಿದು ಜೀವಂತ ಸಮಾಧಿ ಮಾಡಲು ಮುಂದಾಗಿದ್ದಾರೆ.