ಮಹಾರಾಷ್ಟ್ರದ ಪರ್ಭಾನಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆ ಮೇಲೆ ಇರಿಸಲಾಗಿದ್ದ ಸಂವಿಧಾನದ ಪ್ರತಿಕೃತಿಯನ್ನು ಧ್ವಂಸಗೊಳಿರುವುದನ್ನು ಖಂಡಿಸಿ ಕರೆ ನೀಡಲಾಗಿದ್ದ ಬಂದ್ ಬುಧವಾರ ಹಿಂಸಾಚಾರಕ್ಕೆ ತಿರುಗಿದೆ.
ಸಂವಿಧಾನದ ಪ್ರತಿಕೃತಿಯನ್ನು ವಿರೂಪಗೊಳಿಸಿರುವ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನೆಯ ವೇಳೆ ಕಲ್ಲುತೂರಾಟ ನಡೆಸಲಾಗಿದ್ದು, ಕೆಲ ಅಂಗಡಿಗಳ ನಾಮಫಲಕಗಳನ್ನು ಕೂಡ ಧ್ವಂಸಗೊಳಿಸಲಾಗಿದೆ. ವೈರಲ್ ವೀಡಿಯೊದಲ್ಲಿ ಪ್ರತಿಭಟನಾಕಾರರು ನಡುರಸ್ತೆಯಲ್ಲಿ ಅಂಗಡಿಯೊಂದರ ನಾಮಫಲಕಕ್ಕೆ ಬೆಂಕಿ ಹಚ್ಚಿರುವುದು ಕಂಡು ಬಂದಿದೆ.
ಪರ್ಭಾನಿ ರೈಲು ನಿಲ್ದಾಣದ ಹೊರಗಿರುವ ಅಂಬೇಡ್ಕರ್ ಪ್ರತಿಮೆಯ ಕೈಯಲ್ಲಿ ಇರಿಸಲಾಗಿದ್ದ, ಸಂವಿಧಾನದ ಪ್ರತಿಕೃತಿಯನ್ನು ಅಪರಿಚಿತ ವ್ಯಕ್ತಿಗಳು ಹಾನಿಗೊಳಿಸಿದ್ದರಿಂದ ಪ್ರತಿಭಟನೆ ಭುಗಿಲೆದ್ದಿದೆ. ಸಂವಿಧಾನದ ಪ್ರತಿಕೃತಿಗೆ ಉಂಟಾದ ಹಾನಿಯ ಬಗ್ಗೆ ಸುದ್ದಿ ಹರಡಿದ ನಂತರ ಸುಮಾರು 200 ಜನರು ಪ್ರತಿಮೆ ಬಳಿ ಜಮಾಯಿಸಿ ಘೋಷಣೆಗಳನ್ನು ಕೂಗಿದ್ದಾರೆ.
ಸಂಜೆ 6 ಗಂಟೆಗೆ ರೈಲ್ವೇ ನಿಲ್ದಾಣದಲ್ಲಿ, ನಂದಿಗ್ರಾಮ್ ಎಕ್ಸ್ ಪ್ರೆಸ್ ರೈಲಿನ ಪೈಲಟ್ ನ್ನು ರೈಲಿನಿಂದ ಎಳೆದೊಯ್ದು ಹಲ್ಲೆ ನಡೆಸಿದ್ದಾರೆ. ಪ್ರತಿಭಟನಾಕಾರರು ಸುಮಾರು 30 ನಿಮಿಷಗಳ ಕಾಲ ರೈಲು ಸಂಚಾರಕ್ಕೆ ಅಡ್ಡಿಪಡಿಸಿದ್ದು, ರೈಲ್ವೆ ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ಮಧ್ಯಪ್ರವೇಶಿಸಿ, ಹಳಿಗಳನ್ನು ತೆರವುಗೊಳಿಸಿದ್ದಾರೆ.