ಖಾಸಗಿ ಶಾಲೆಯ ನರ್ಸರಿ ತರಗತಿಯ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರದಲ್ಲಿ ನಡೆದ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಇಂದು ಹೆಚ್ಚಿನ ಶಾಲೆಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ರೈಲ್ವೆ ನಿಲ್ದಾಣ ಮತ್ತು ಬದ್ಲಾಪುರದ ಇತರ ಭಾಗಗಳಲ್ಲಿ ಕಲ್ಲು ತೂರಾಟದ ಘಟನೆಗಳಲ್ಲಿ ಕನಿಷ್ಠ 17 ನಗರ ಪೊಲೀಸ್ ಸಿಬ್ಬಂದಿ ಮತ್ತು ಸುಮಾರು ಎಂಟು ರೈಲ್ವೆ ಪೊಲೀಸರು ಗಾಯಗೊಂಡಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು 72 ಜನರನ್ನು ಬಂಧಿಸಿದ್ದಾರೆ ಎಂದು ಹೇಳಿದರು.
ಅಧಿಕಾರಿಗಳು ಹೇಳುವ ಪ್ರಕಾರ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. ಕಳೆದ ವಾರ ವಾಶ್ರೂಮ್ನಲ್ಲಿ ಶಾಲಾ ಸ್ವೀಪರ್ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ನಂತರ ಸಾವಿರಾರು ಪ್ರತಿಭಟನಾಕಾರರು ನಿಲ್ದಾಣದಲ್ಲಿ ರೈಲು ಹಳಿಗಳನ್ನು ತಡೆದು ಸ್ಥಳೀಯ ಶಾಲಾ ಕಟ್ಟಡಕ್ಕೆ ನುಗ್ಗಿ ಶಾಲಾ ಕಟ್ಟಡ ಧ್ವಂಸ ಮಾಡಿದ್ದರಿಂದ ಇಡೀ ಬದ್ಲಾಪುರ ನಗರ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗಿತ್ತು.