ತಿರುಪತಿ ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ಆರೋಪ ಇಡೀ ದೇಶದಲ್ಲೇ ಭಾರೀ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ ಟಿಟಿಡಿ ಮಹತ್ವದ ನಿರ್ಧಾರ ಕೈಗೊಂಡಿದೆ. ತಿರುಮಲದ ಪಾವಿತ್ರ್ಯತೆ ಕಾಪಾಡಲು ಟಿಟಿಡಿ ಮಹಾ ಶಾಂತಿಯಾಗಕ್ಕೆ ಮುಂದಾಗಿದೆ. ಮತ್ತೊಂದೆಡೆ ಇಡೀ ದೇಗುಲ ಶುದ್ಧೀಕರಣಕ್ಕೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸೂಚನೆ ನೀಡಿದ್ದು, ತಿಮ್ಮಪ್ಪನ ಸನ್ನಿಧಾನದಲ್ಲಿ ಶುದ್ಧಿ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.
ತಿರುಪತಿ ತಿಮ್ಮಪ್ಪನ ದರ್ಶನ ಮಿಸ್ ಆದ್ರೂ ಕೂಡ. ಲಡ್ಡು ಪ್ರಸಾದವನ್ನು ಮಾತ್ರ ಪ್ರತಿಯೊಬ್ಬ ಭಕ್ತರು ಮೆರೆಯದೇ ತರ್ತಿದ್ರು.. ಯಾಕಂದ್ರೆ ದೇವರಷ್ಟೇ ತಿಮ್ಮಪ್ಪನ ಪ್ರಸಾದವಾದ ಲಡ್ಡು ಕೂಡ ಶ್ರೇಷ್ಠ ಎಂದು. ಆದ್ರೀಗ ತಿರುಪತಿ ಲಡ್ಡು ಕಲಬೆರಕೆ ವಿವಾದ ಭಾರತದಲ್ಲಿ ಸಂಚಲನ ಮೂಡಿಸಿದೆ. ಹಿಂದೂ ಸಮುದಾಯಗಳು ಟಿಟಿಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ. ಇದರ ಬೆನ್ನಲ್ಲೇ ಎಚ್ಚೆತ್ತ ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ ಮಹತ್ವದ ಹೆಜ್ಜೆ ಇಟ್ಟಿದೆ. ತಿಮ್ಮಪ್ಪನ ಭಕ್ತರಲ್ಲಿ ಮೂಡಿರುವ ಗೊಂದಲವನ್ನು ದೂರ ಮಾಡಲು ಶಾಂತಿಯಾಗಕ್ಕೆ ಮುಂದಾಗಿದೆ.
ಲಡ್ಡು ವಿವಾದದ ಬೆನ್ನಲ್ಲೇ ಕಳೆದ ಮೂರು ದಿನಗಳಿಂದ ತಿರುಪತಿಗೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಆಗಿತ್ತು. ವೀಕೆಂಡ್ ಹಾಗೂ ತಮಿಳುನಾಡಿನ ಶ್ರಾವಣ ಮಾಸ ಆರಂಭ ಹಿನ್ನೆಲೆ, ತಿರುಮಲದಲ್ಲಿ ಮತ್ತೆ ಭಕ್ತರ ಸಂಖ್ಯೆ ಹೆಚ್ಚಾಗಿದೆ. ತಮಿಳುನಾಡಿನ ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ತಿರುಪತಿಗೆ ಭೇಟಿ ನೀಡ್ತಿರುವ ಕೆಲ ಭಕ್ತರಲ್ಲಿ ಲಡ್ಡು ಬಗ್ಗೆ ಇನ್ನೂ ಗೊಂದಲ ದೂರ ಆಗಿಲ್ಲ, ಹೀಗಾಗಿ ವಿಶೇಷ ಪೂಜೆಗೆ ಟಿಟಿಡಿ ನಿರ್ಧರಿಸಿದೆ.
ಇಂದಿನಿಂದ ಮೂರು ದಿನಗಳ ಕಾಲ ತಿರುಮಲದಲ್ಲಿ ಮಹಾಶಾಂತಿ ಯಾಗ ನಡೆಯಲಿದೆ. ಲಡ್ಡು ಪ್ರಸಾದ ಅಪವಿತ್ರ ಆದ ಕಾರಣಕ್ಕೆ ಶುದ್ಧಿಗೊಳಿಸಲು ಮಹಾ ಶಾಂತಿ ಯಾಗ ಮಾಡಲಾಗ್ತಿದೆ ಎಂದು ಟಿಟಿಡಿ ತಿಳಿಸಿದೆ. ಈ ಯಾಗದಲ್ಲಿ ವೇದ ವಿದ್ವಾಂಸರ ಜೊತೆಗೆ ಖುತ್ವಿಕರು ಕೂಡ ಭಾಗಿಯಾಗಲಿದ್ದಾರೆ. ಈಗಾಗಲೇ ಟಿಟಿಡಿ ಎಕ್ಸಿಕ್ಯೂಟಿವ್ ಆಫೀಸರ್, ಉನ್ನತಾಧಿಕಾರಿಗಳು, ಪ್ರಧಾನ ಅರ್ಚಕರು, ವಿಧ್ವಾಂಸರ ಜೊತೆ ಗುಣಮಟ್ಟದ ಲಡ್ಡು ಪ್ರಸಾದದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ತಿರುಪತಿಯ ಲಡ್ಡು ತಯಾರಿಕೆಯಲ್ಲಿ ದನದ ಕೊಬ್ಬು ಮೀನಿನ ಎಣ್ಣೆ ಬಳಕೆ ವಿಷಯ ಬೆಳಕಿಗೆ ಬರ್ತಿದ್ದಂತೆ. ಕಲಿಯುಗ ದೈವ ತಿಮ್ಮಪ್ಪನ ಸನ್ನಿಧಾನವನ್ನೂ ಶುದ್ಧೀಕರಿಸಬೇಕು ಎಂಬ ಮಾತುಗಳು ಕೇಳಿ ಬಂದಿದೆ. ಈಗಾಗಲೇ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಶ್ರೀಪೀಠದ ಪಾವಿತ್ರತ್ಯೆಯನ್ನು ಕಾಪಾಡಲು ದೇವಾಲಯ ಶುದ್ಧೀಕರಣ, ಪ್ರೋಕ್ಷಣೆ ಮತ್ತು ಕುಂಭಾಭಿಷೇಕ ಮಾಡಲಾಗುವುದು ಎಂದು ಹೇಳಿದ್ದಾರೆ. ಈ ಸಂಬಂಧ ಸನಾತನ ಧರ್ಮದ ವಿದ್ವಾಂಸರನ್ನು ಸಹ ಸಂಪರ್ಕಿಸಲಾಗಿದೆ. ಇನ್ನು ಅಕ್ಟೋಬರ್ 1 ಕ್ಕೆ ಟಿಟಿಡಿಯವರು ದೇವಾಲಯ ಶುದ್ದೀಕರಣ ಮಾಡಬೇಕಿತ್ತು. ಆದ್ರೀಗ ತಿಮ್ಮಪ್ಪನ ಪ್ರಸಾದ ಅಪವಿತ್ರ ವಿವಾದಿಂದ ನಾಳೆಯಿಂದಲೇ ದೇಗುಲ ಶುದ್ದೀಕರಣ ಮಾಡಲು ಟಿಟಿಡಿ ಮುಂದಾಗಿದ್ದು, ಈ ಕಾರ್ಯದಲ್ಲಿ ನಿರತವಾಗಿದೆ.