‘ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ನಡೆಸಲು ಬಿಡುವುದಿಲ್ಲ’ ಎಂದು ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಮಾದ್ಯಮದವರೊಂದಿಗೆ ಇಂದು ಮಾತನಾಡಿದ ಅವರು, ‘ನಾನು ಸಂಸದ ಆಗಿರಲಿ, ಇಲ್ಲದಿರಲಿ ತಾಯಿ ಚಾಮುಂಡೇಶ್ವರಿಗೆ ಅವಮಾನ ಆಗುವುದಕ್ಕೆ ಬಿಡುವುದಿಲ್ಲ. ಯಾರ ನಿಲುವು ಏನೇ ಇರಲಿ. ನನ್ನ ನಿಲುವು ಮಾತ್ರ ಯಾವತ್ತಿಗೂ ಒಂದೇ’ ಎಂದರು. ‘ಮಹಿಷ ದಸರಾ ನಡೆಸುವವರು ಅವರ ಮನೆಗಳಲ್ಲಿ ಮಾಡಿಕೊಳ್ಳಲಿ. ನಮಗೆ ಮಹಿಷನಂತಹ ಮಕ್ಕಳೇ ಹುಟ್ಟಲಿ ಎಂದು ದಿನವೂ ಪೂಜಿಸಲಿ. ಅದಕ್ಕೆ ನಮ್ಮದೇನೂ ವಿರೋಧವಿಲ್ಲ’ ಎಂದು ಹೇಳಿದರು.
ನಾಗಮಂಗಲದಲ್ಲಿ ನಡೆದ ಗಲಭೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಮುಸ್ಲಿಮರ ಕೈಯಲ್ಲಿರುವ ಪೆಟ್ರೋಲ್ ಬಾಂಬ್, ತಲ್ವಾರ್ಗಳನ್ನು ಸರ್ಕಾರ ಕಿತ್ತುಕೊಳ್ಳಬೇಕು. ಇಲ್ಲದಿದ್ದರೆ ಮುಂದೆ ನಡೆಯುವ ಗಣೇಶ ಮೂರ್ತಿಗಳ ಮೆರವಣಿಗಳಲ್ಲಿ ನಾವೂ (ಹಿಂದೂಗಳು) ಕೈಯಲ್ಲಿ ಪೆಟ್ರೋಲ್ ಬಾಂಬ್ ಹಾಗೂ ತಲ್ವಾರ್ಗಳನ್ನು ಹಿಡಿದುಕೊಳ್ಳಬೇಕಾಗುತ್ತದೆ. ಆಗ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಸರ್ಕಾರವೇ ನೇರ ಹೊಣೆ ಆಗಬೇಕಾಗುತ್ತದೆ’ ಎಂದರು. ‘ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಗಣೇಶ ಮೂರ್ತಿಗಳ ಮೆರವಣಿಗೆ ಅದ್ದೂರಿಯಾಗಿ ನಡೆಯುವುದಿದೆ. ಅಷ್ಟರಲ್ಲಿ ಸರ್ಕಾರ ಮುಸ್ಲಿಂ ಪುಂಡರ ಮೇಲೆ ನಿಯಂತ್ರಣ ಹೇರಬೇಕು.
ಇಲ್ಲದಿದ್ದರೆ ನಮ್ಮ ರಕ್ಷಣೆ ಜವಾಬ್ದಾರಿ ನಮಗೆ ಗೊತ್ತಿದೆ’ ಎಂದು ಹೇಳಿದರು. ‘ನಾಗಮಂಗಲದಲ್ಲಿ ಅಮಾಯಕ ಹಿಂದೂಗಳನ್ನು ಬಂಧಿಸಿದರೆ ನಾವು ಮತ್ತೆ ಅಲ್ಲಿಗೂ ಬರುತ್ತೇವೆ, ಪೊಲೀಸ್ ಠಾಣೆಗೂ ಬರುತ್ತೇವೆ. ಅಲ್ಲಿ ಗಲಾಟೆ ಶುರು ಮಾಡಿದವರ ಮೇಲೆ ಕಠಿಣ ಕ್ರಮ ಆಗಬೇಕು. ‘ಗಲಾಟೆ ಶುರು ಮಾಡಿದವರನ್ನು ಬಿಟ್ಟು ಅದಕ್ಕೆ ಪ್ರತಿಕ್ರಿಯೆ ಕೊಟ್ಟವರ ಮೇಲೆ ಕ್ರಮವಾದರೆ ಅದರ ಅರ್ಥವೇನು? ಈ ಸರ್ಕಾರ ಪೊಲೀಸರಿಗೆ ಕ್ರಮ ಜರುಗಿಸುವ ಸ್ವಾತಂತ್ರ್ಯವನ್ನೇ ಕೊಟ್ಟಿಲ್ಲ. ತಾಲಿಬಾನ್ ಮನಸ್ಥಿತಿಯಂತೆ ಪೊಲೀಸರನ್ನು ನಿಯಂತ್ರಿಸುತ್ತಿದ್ದಾರೆ. ಸರ್ಕಾರ ಹೇಗೆ ಇರುತ್ತದೆಯೋ ಇಲಾಖೆಯೂ ಹಾಗೆ ಇರುತ್ತದೆ. ಆಳುವವನು ಮೊದಲು ನೆಟ್ಟಗಿರಬೇಕು. ಅವರೇ ಮುಸ್ಲಿಮರ ಓಲೈಕೆಗಿಳಿದರೆ ಇಂತಹ ಸ್ಥಿತಿ ಬರುತ್ತದೆ’ ಎಂದು ಟೀಕಿಸಿದರು.
‘ಈಚೆಗೆ ನಡೆದ ಆರ್ಎಸ್ಎಸ್ ಸಮನ್ವಯ ಸಭೆಯಲ್ಲಿ ನಾನು ಯಾವ ಅಸಮಾಧಾನವನ್ನೂ ವ್ಯಕ್ತಪಡಿಸಿಲ್ಲ. ಕೊನೆಯ ಸಾಲಿನಲ್ಲಿ ಕುಳಿತು ಅವರು ಹೇಳಿದ್ದನ್ನು ಕೇಳಿಕೊಂಡು ಬಂದಿದ್ದೇನೆ. ಸಂಘದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವಷ್ಟು ದೊಡ್ಡವನಾಗಿಲ್ಲ. ಅದರಿಂದಲೇ ಬೆಳೆದವನು ನಾನು. ನನ್ನ ಜ್ಞಾನರ್ಜನೆಯಲ್ಲಿ ಆರ್ಎಸ್ಎಸ್ ಪಾತ್ರ ದೊಡ್ಡದಿದೆ. ಅಲ್ಲಿನವರ ಮೇಲೆ ನಾನೇಕೆ ಅಸಮಾಧಾನ ವ್ಯಕ್ತಪಡಿಸಲಿ?’ ಎಂದು ಕೇಳಿದರು.