ಮಾರುಕಟ್ಟೆಯಲ್ಲಿ ಖರೀದಿಸುವ ವಿವಿಧ ಆಹಾರ ಪದಾರ್ಥಗಳ ಗುಣಮಟ್ಟದಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಅಳವಡಿಸಿಕೊಳ್ಳಲು ಮ್ಯಾಜಿಕ್ ಬಾಕ್ಸ್ ಆಹಾರ ಪರೀಕ್ಷಾ ಕಿಯಾಸ್ಕ್ ಗಳು ಸಹಕಾರಿಯಾಗಲಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಅಭಿಪ್ರಾಯಪಟ್ಟರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ವತಿಯಿಂದ ದೇಶದಲ್ಲೇ ಪ್ರಪ್ರಥಮ ಬಾರಿಗೆ ವಿನುತನ ಪ್ರಯತ್ನವಾಗಿ ಬೆಂಗಳೂರು ನಗರದ ಫೀನಿಕ್ಸ್ ಮಾಲ್ ಆಫ್ ಏಷಿಯಾದಲ್ಲಿ ಆಹಾರ ಪದಾರ್ಥಗಳ ತ್ವರಿತ ಪರೀಕ್ಷೆಗಾಗಿ ಪ್ರಾಯೋಗಿಕವಾಗಿ ನಿರ್ಮಿಸಿರುವ ಮ್ಯಾಜಿಕ್ ಬಾಕ್ಸ್’ ಆಹಾರ ಪರೀಕ್ಷಾ ಕೇಂದ್ರವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಮನೆಯಲ್ಲಿ ಅಡುಗೆ ಮಾಡುವಾಗ ನಾವು ಎಚ್ಚರಿಕೆವಹಿಸಿ ನೈಸರ್ಗಿಕ ಹಾಗೂ ಒಳ್ಳೆಯ ಗುಣಮಟ್ಟದ ಕಲಬೆರಕೆ ಇಲ್ಲದ ಉತ್ತಮ ಆಹಾರ ಉತ್ಪನ್ನಗಳನ್ನು ಬಳಸುತ್ತೇವೆ. ಆದರೆ ಹೊರಗೆ ತಿನ್ನುವ ಆಹಾರಗಳಲ್ಲಿ ನೋಡಲು ಆಕರ್ಷಕವಾಗಿರುವಂತೆ ರಾಸಾಯನಿಕ ಬಣ್ಣಗಳನ್ನು ಮತ್ತು ರುಚಿಯನ್ನು ಹೆಚ್ಚಿಸುವ ಟೇಸ್ಟ್ ಮೇಕರ್ ಗಳನ್ನು ಬಳಸಲಾಗುತ್ತದೆ.
ಆರ್ಥಿಕವಾಗಿ ಲಾಭದಾಯಕ ಮಾಡಿಕೊಳ್ಳಲು ಕಲಬೆರಕೆ ವಸ್ತುಗಳನ್ನು ಇಲ್ಲಿ ಬಳಸಲಾಗುತ್ತದೆ ಎಂದರು. ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಬದಲಾದ ಜೀವನಶೈಲಿ, ಆಹಾರ ಪದ್ಧತಿಗಳು ಮತ್ತು ಮಲಿನಗೊಂಡ ಪರಿಸರದಲ್ಲಿ ಬದುಕುತ್ತಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಮಧುಮೇಹ, ಹೃದಯಘಾತ ಮತ್ತು ಮಾರಕ ಕ್ಯಾನ್ಸರ್ ಗಳಿಗೆ ತುತ್ತಾಗುತ್ತಿದ್ದಾರೆ. ಹಾಗಾಗಿ ನಾವು ಸೇವಿಸುವ ಆಹಾರ ಒಳ್ಳೆಯ ಗುಣಮಟ್ಟ ಹಾಗೂ ನೈಸರ್ಗಿಕ ವಸ್ತುಗಳಿಂದ ಕೂಡಿರುವುದನ್ನು ನಾವು ಖಾತರಿ ಪಡಿಸಿಕೊಳ್ಳಬೇಕು ಎಂದರು.
ಇದನ್ನೂ ಓದಿ: ಮುಡಾ ಕೇಸ್; ಸದ್ಯದಲ್ಲೇ ಸಿಎಂಗೂ ನೋಟಿಸ್ ಸಾಧ್ಯತೆ..!
ಈ ನಿಟ್ಟಿನಲ್ಲಿ ಸಾರ್ವಜನಿಕರೇ ಖುದು ಪರೀಕ್ಷಿಸಿಕೊಳ್ಳಬಹುದಾದಂತಹ ಮ್ಯಾಜಿಕ್ ಬಾಕ್ಸ್ ಆಹಾರ ಪರೀಕ್ಷಾ ಕೇಂದ್ರಗಳು ಅತ್ಯಂತ ಸಹಕಾರಿಯಾಗಲಿವೆ ಎಂದ ಅವರು, ಈ ವ್ಯವಸ್ಥೆಯು ಆಹಾರ ಉತ್ಪನ್ನ ಹಾಗೂ ಮಾರುಕಟ್ಟೆದಾರರಲ್ಲಿ ಹೆಚ್ಚು ಪಾರದರ್ಶಕತೆ ಹಾಗೂ ಉತ್ತರದಾಯಿತ್ವವನ್ನು ರೂಪಿಸಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು. ಅಲ್ಲದೆ ಜನಸಾಮಾನ್ಯರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಲಾಖೆಯು ನಗರದ ವಿವಿಧ ಭಾಗಗಳಲ್ಲಿ ಸತತ ಆಹಾರ ಉತ್ಪನ್ನಗಳ ಗುಣಮಟ್ಟದ ಪರೀಕ್ಷೆಯನ್ನು ನಡೆಸುತ್ತಾ ಬಂದಿದೆ. ತುಪ್ಪದ ಸ್ಯಾಂಪಲ್ ಗಳನ್ನು ಕೂಡ ಇಲಾಖೆ ಪರೀಕ್ಷಿಸಿದೆ. ಒಟ್ಟು 230 ಸ್ಯಾಂಪಲ್ ಗಳನ್ನು ಪರೀಕ್ಷಿಸಿದಾಗ ಅವುಗಳಲ್ಲಿ 224 ಸ್ಯಾಂಪಲ್ ಗಳು ಸೇವನೆಗೆ ಸುರಕ್ಷಿತವಾಗಿದೆ ಎಂದು ಕಂಡು ಬಂದಿದೆ. ಐದು ಸ್ಯಾಂಪಲ್ ಗಳು ಅಸುರಕ್ಷಿತ ಎಂದು ಕಂಡುಬಂದಿದ್ದು, ಒಂದು ಸ್ಯಾಂಪಲ್ ಮಾತ್ರ ಕಳಪೆ ಗುಣಮಟ್ಟದ್ದಾಗಿದೆ ಎಂದು ವರದಿಯಾಗಿದೆ ಎಂದು ಅವರು ತಿಳಿಸಿದರು. ರಾಜ್ಯಾದ್ಯಂತ ರೈಲ್ವೆ ನಿಲ್ದಾಣದಲ್ಲಿರುವ ಆಹಾರ ಮಳಿಗೆಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ನಿಯಮಾವಳಿಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದರ ಕುರಿತು ಖಚಿತಪಡಿಸಿಕೊಳ್ಳಲು ವಿಶೇಷ ಆಂದೋಲನವನ್ನು ಕೈಗೊಳ್ಳುವ ಮೂಲಕ ಕಳೆದ ಸೆಪ್ಟೆಂಬರ್ ಮಾಹೆಯಲ್ಲಿ 142 ಆಹಾರ ಮಳಿಗೆಗಳನ್ನು ತಪಾಸಣೆ ಮಾಡಲಾಗಿದ್ದು, ಕಂಡು ಬಂದಿರುವ ಲೋಪಗಳನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ ಹಾಗೂ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ರಾಜ್ಯದ ಪ್ರಮುಖ ಪ್ರವಾಸಿ, ತಾಣಗಳಲ್ಲಿ ಸ್ಥಾಪಿಸಿರುವ 35 ಹೋಟೆಲ್ ಘಟಕಗಳಲ್ಲಿ ಗ್ರಾಹಕರುಗಳಿಗೆ ಸರಬರಾಜು ‘ಮಾಡಲಾಗುವ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಕುರಿ/ಮೇಕೆ ಮಾಂಸದ 184 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ಅವುಗಳಲ್ಲಿ 179 ಮಾದರಿಗಳು ಸುರಕ್ಷಿತ ಎಂದು, 5 ಮಾದರಿಗಳು ಕಳಪೆ ಎಂದು, ಮೊಟ್ಟೆಯ 81 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ಅವುಗಳಲ್ಲಿ 80 ಮಾದರಿಗಳು ಸುರಕ್ಷಿತ ಎಂದು, 1 ಮಾದರಿಯು ಕಳಪೆ ಎಂದು ಹಾಗೂ ಕೋಳಿ ಮಾಂಸದ 246 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ಅವುಗಳಲ್ಲಿ 236 ಮಾದರಿಗಳು ಸುರಕ್ಷಿತ ಎಂದು, 10 ಮಾದರಿಗಳು ಕಳಪೆ ಗುಣಮಟ್ಟದ್ದಾಗಿದೆ ಎಂದು ವರದಿಯಾಗಿರುತ್ತದೆ ಎಂದವರು ತಿಳಿಸಿದರು.
ಇದನ್ನೂ ಓದಿ: ಬಿಗ್ಬಾಸ್ಗೆ ಸುದೀಪ್ ಗೈರು; ವೀಕೆಂಡ್ ಶೋ ನಡೆಸೋರು ಯಾರು?
ಇಲಾಖೆಯ ಆಯುಕ್ತರಾದ ಕೆ. ಶ್ರೀನಿವಾಸ್ ಅವರು ಮಾತನಾಡಿ ಬೆಂಗಳೂರು ನಗರಾದ್ಯಂತ ಒಟ್ಟು 10 ಮಾಲ್ ಗಳಲ್ಲಿ ಈ ಆಹಾರ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು. ತುಮಕೂರು ರಸ್ತೆಯ ವೈಷ್ಣವಿ ಸಫಾಯರ್ ಮಾಲ್, ಥಣಿಸಂದ್ರದ ಎಲಿಮೆಂಟ್ಸ್ ಮಾಲ್, ಬನ್ನೇರುಘಟ್ಟ ರಸ್ತೆಯ ಮೀನಾಕ್ಷಿ ಮಾಲ್, ಚರ್ಚ್ ಸ್ಟ್ರೀಟ್ ಒನ್ ಶೋಭಾ ಮಾಲ್, ಬೆಳ್ಳಂದೂರಿನಲ್ಲಿರುವ ಸೆಂಟ್ರಲ್ ಮಾಲ್, ಬೆನ್ನಿಗಾನಹಳ್ಳಿಯಲ್ಲಿರುವ ಗೋಪಾಲನ್ ಸಿಗ್ನೆಚರ್ ಮಾಲ್, ಕೋರಮಂಗಲದಲ್ಲಿರುವ ನೆಕ್ಸಸ್ ಫೋರಮ್ ಮಾಲ್, ಥಣಿಸಂದ್ರ ದಲ್ಲಿರುವ ಭಾರತೀಯ ಮಾಲ್ ಆಫ್ ಬೆಂಗಳೂರು ಹಾಗೂ ಮಾಗಡಿ ರಸ್ತೆಯಲ್ಲಿರುವ ಜಿ ಟಿ ವರ್ಲ್ಡ್ ಮಾಲ್ ಗಳಲ್ಲಿ ಈ ಪರೀಕ್ಷೆ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅವರು ತಿಳಿಸಿದರು.
ಈ ಕೇಂದ್ರಗಳಲ್ಲಿ ಸಾರ್ವಜನಿಕರು ಪ್ರತಿದಿನ ಬಳಸುವ ಆಹಾರ ಪದಾರ್ಥಗಳಾದ ಬೇಳೆ ಕಾಳುಗಳು, ಸಕ್ಕರೆ, ಅಡುಗೆ ಎಣ್ಣೆ, ಟೀ ಪುಡಿ, ಉಪ್ಪು, ಹಾಲು, ತುಪ್ಪ, ಪನೀರ್, ಬೆಣ್ಣೆ ತರಕಾರಿಗಳು, ಕುಡಿಯುವ ನೀರು ಸೇರಿದಂತೆ ಇತರೆ ಆಹಾರ ಸಾಮಗ್ರಿಗಳ ಗುಣಮಟ್ಟವನ್ನು ತ್ವರಿತ ಪರೀಕ್ಷೆಯಿಂದ ಖಚಿತಪಡಿಸಿಕೊಳ್ಳಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು. ಸಾರ್ವಜನಿಕರಲ್ಲಿ ಆಹಾರ ಗುಣಮಟ್ಟ ಆಹಾರ ಕಲಬೆರಿಕೆ ಬಗ್ಗೆ ಅರಿವು ಮೂಡಿಸುವುದೇ ಈ ಪ್ರಯತ್ನದ ಉದ್ದೇಶ ಎಂದು ಅವರು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಮಾಲ್ ಆಫ್ ಏಷ್ಯಾದ ಜನರಲ್ ಮ್ಯಾನೇಜರ್ ಸತೀಶ್ ಸೇರಿದಂತೆ ಅಹಾರ ಸುರಕ್ಷತೆ ಮತ್ತು ಗುಣಮಟ್ಟಿಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.