ವಿಷ್ಣು ಶಶಿ ಶಂಕರ್ ನಿರ್ದೇಶನದ ಮಲಯಾಳಂ ಹಾರರ್-ಫ್ಯಾಂಟಸಿ ಸಿನಿಮಾ ಸುಮತಿ ವಳವು. ಅರ್ಜುನ್ ಅಶೋಕನ್ ಮತ್ತು ಮಾಳವಿಕಾ ಮನೋಜ್ ಮುಖ್ಯ ಪಾತ್ರಗಳಲ್ಲಿ ಈ ಸಿನಿಮಾದಲ್ಲಿದ್ದಾರೆ. ಅಭಿಲಾಷ್ ಪಿಳ್ಳೈ ಚಿತ್ರಕಥೆ ಬರೆದಿರುವ ಈ ಹಾರರ್ ಥ್ರಿಲ್ಲರ್ ಸಿನಿಮಾ ನವೆಂಬರ್ 30ರಿಂದ ಶೂಟಿಂಗ್ ಆರಂಭಿಸಿದೆ. ಈ ಹಿಂದೆ ಮಲಯಾಳಂನಲ್ಲಿ ಮಲ್ಲಿಕಾಪುರಂ ಸಿನಿಮಾ ನಿರ್ದೇಶನದ ಅನುಭವ ಹೊಂದಿರುವ ವಿಷ್ಣು ಶಶಿ ಇದೀಗ ಈ ವಿಶೇಷ ಸಿನಿಮಾದ ಜತೆಗೆ ಆಗಮಿಸುತ್ತಿದ್ದಾರೆ.
ವಾಟರ್ಮ್ಯಾನ್ ಫಿಲ್ಮ್ಸ್ ಎಲ್ಎಲ್ಪಿ, ಥಿಂಕ್ ಸ್ಟುಡಿಯೋಸ್ನ ಸಹಯೋಗದೊಂದಿಗೆ, ತನ್ನ ಮುಂಬರುವ ಚಿತ್ರ ಸುಮತಿ ವಲವು ಚಿತ್ರೀಕರಣದ ಪ್ರಾರಂಭವನ್ನು ಹೆಮ್ಮೆಯಿಂದ ಘೋಷಿಸುತ್ತದೆ. ಈ ಬಹು ನಿರೀಕ್ಷಿತ ಯೋಜನೆಯು ಭಯಾನಕ ಮತ್ತು ಹಾಸ್ಯದ ಅಂಶಗಳನ್ನು ಸಂಯೋಜಿಸುತ್ತದೆ, ಪ್ರೇಕ್ಷಕರಿಗೆ ರೋಮಾಂಚಕ ಮತ್ತು ನಗು ತುಂಬಿದ ಸಿನಿಮೀಯ ಅನುಭವವನ್ನು ನೀಡುತ್ತದೆ. ಚಿತ್ರವು ನವೆಂಬರ್ 30, 2024 ರಂದು ಅದರ ಚಿತ್ರೀಕರಣವನ್ನು ಪ್ರಾರಂಭಿಸಿತು, ಇದು ರೋಮಾಂಚಕಾರಿ ಪ್ರಯಾಣದ ಆರಂಭವನ್ನು ಸೂಚಿಸುತ್ತದೆ.
ಹಾರರ್ ಕಾಮಿಡಿ ಸಿನಿಮಾ
ಸುಮತಿ ವಳವು ಸಿನಿಮಾ ಹಾರರ್ ಕಾಮಿಡಿ ಸಿನಿಮಾ. ನೋಡುಗರನ್ನು ಸೀಟಿನ ತುದಿಗೆ ತಂದು ಕೂರಿಸುವಷ್ಟು ಕಥೆಯನ್ನು ಬಿಗಿಯಾಗಿ ಹೆಣೆಯಲಾಗಿದೆ ಎಂಬುದು ಚಿತ್ರತಂಡದ ಭರವಸೆಯ ಮಾತು. ವಾಟರ್ಮ್ಯಾನ್ ಫಿಲ್ಮ್ಸ್ ಎಲ್ಎಲ್ಪಿ ಮತ್ತು ಥಿಂಕ್ ಸ್ಟುಡಿಯೋಸ್ನ ಸಹಯೋಗದಲ್ಲಿ ಸುಮತಿ ವಳವು ಸಿನಿಮಾ ನಿರ್ಮಾಣವಾಗುತ್ತಿದೆ.
ಪಾತ್ರಧಾರಿಗಳು ಯಾರಿದ್ದಾರೆ?
ಸುಮತಿ ವಳವು ಸಿನಿಮಾದಲ್ಲಿ ಸ್ಟಾರ್ ಕಲಾವಿದರ ದಂಡೇ ಇದೆ. ಅರ್ಜುನ್ ಅಶೋಕನ್, ಬಾಲು ವರ್ಗೀಸ್, ಗೋಕುಲ್ ಸುರೇಶ್, ಸೈಜು ಕುರುಪ್, ಸಿದ್ಧಾರ್ಥ್ ಬರತನ್, ಮಾಳವಿಕಾ ಮನೋಜ್, ಶ್ರೀಪಥ್ ಯಾನ್, ದೇವಾನಂದ, ಶ್ರವಣ್ ಮುಖೇಶ್, ಗೋಪಿಕಾ ಮುಖೇಶ್, ಅನಿಲ್, ಶಿವದಾ, ಸಿಜಾ ರೋಸ್, ಜಸ್ನ್ಯಾ, ಜಯದೀಶ್ ಚಿತ್ರದಲ್ಲಿದ್ದಾರೆ.
ತಾಂತ್ರಿಕ ಬಳಗ ಹೀಗಿದೆ…
ಸುಮತಿ ವಳವು ಸಿನಿಮಾದ ನಿರ್ದೇಶನದ ಚುಕ್ಕಾಣಿ ಹಿಡಿದವರು ಸೂಪರ್ ಹಿಟ್ ಮಲಿಕಪ್ಪುರಂ ಸಿನಿಮಾ ಮೂಲಕ ಮೆಚ್ಚುಗೆ ಪಡೆದ ನಿರ್ದೇಶಕ ವಿಷ್ಣು ಶಶಿ ಶಂಕರ್. ಮಲ್ಲಿಕಾಪುರಂ ಸೇರಿ ಕ್ಯಾಡವರ್ ಮತ್ತು ಆನಂದ್ ಶ್ರೀಬಾಲಾ ಸಿನಿಮಾಕ್ಕೂ ಕಥೆ ಬರೆದಿದ್ದ ಅಭಿಲಾಷ್ ಪಿಳ್ಳೈ ಸುಮತಿ ವಳವು ಚಿತ್ರಕ್ಕೂ ಕಥೆ ಬರೆದಿದ್ದಾರೆ. ಶಂಕರ್ ಪಿ.ವಿ ಅವರ ಛಾಯಾಗ್ರಾಹಣ, ರಂಜಿನ್ ರಾಜ್ ಸಂಗೀತ, ಶಫೀಕ್ ಮೊಹಮ್ಮದ್ ಅಲಿ ಸಂಕಲನ ಚಿತ್ರಕ್ಕಿದೆ. ಅಜಯ್ ಮಂಗಡ್ ಕಲಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.