ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಸಿದ್ದಾರ್ಥ ವಿಹಾರ್ ಟ್ರಸ್ಟ್ಗೆ ಕೆಐಎಡಿಬಿಗೆ ಭೂಮಿ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಆರೋಪದ ಕಾವು ಹೆಚ್ಚಾಗುವ ಮುನ್ನವೇ ಭೂಮಿ ವಾಪಸ್ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ವಿವಾದ ರಾಜ್ಯಪಾಲರ ಅಂಗಳಕ್ಕೆ ತಲುಪುತ್ತಿದ್ದಂತೆಯೇ ಖರ್ಗೆ ಕುಟುಂಬ ಭೂಮಿ ವಾಪಸ್ ನೀಡಲು ನಿರ್ಧರಿಸಿದೆ. ಈ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ ಪ್ರತಿಕ್ರಿಯಿಸಿದ್ದು, ತಪ್ಪು ಮಾಡಿದ್ದಾರೆ ಅನ್ನೋ ಕಾರಣಕ್ಕೆ ಭೂಮಿ ವಾಪಸ್ ನೀಡಿಲ್ಲ ಎಂದಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಭೂಮಿ ಹಂಚಿಕೆಯಾಗಿದ್ದಕ್ಕೆ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದವು. ಸುಮ್ಮನೆ ಏಕೆ ಗೊಂದಲ ಎಂದು ಭೂಮಿ ವಾಪಸ್ ಕೊಟ್ಟಿದ್ದಾರೆ ಎಂದರು.
ಸರ್ಕಾರ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದ ವಿಚಾರವಾಗಿ ಟೀಕಿಸುತ್ತಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿಯವರಿಗೆ ಕಾಮಾಲೆ ಕಣ್ಣು, ಕಾಣುವುದೆಲ್ಲವೂ ಹಳದಿ. ಬಿಜೆಪಿಯವರಿಗೆ ಗ್ರೀನ್ ಕಾಣಲ್ಲ, ಬ್ಲ್ಯೂನೂ ಕಾಣುವುದಿಲ್ಲ. ಎಲ್ಲದರಲ್ಲೂ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು. ಕೇಸ್ ವಾಪಸ್ ಪಡೆಯಲು ಯಾರಾದರೂ ಮನವಿ ಮಾಡುತ್ತಾರೆ. ಆಗ ನಾವು ಅದರ ಪರಿಶೀಲನೆಗೆ ಸಂಪುಟ ಉಪಸಮಿತಿ ರಚನೆ ಮಾಡುತ್ತೇವೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಯಿಂದ ಮಾಹಿತಿ ಕೇಳುತ್ತೇವೆ. ನಂತರ ಸಂಪುಟ ಉಪಸಮಿತಿ ಅದರ ಬಗ್ಗೆ ತೀರ್ಮಾನ ಮಾಡುತ್ತದೆ. ವಾಪಸ್ ತಗೋಬೇಕಾ ಬೇಡವಾ ಎಂದು ನಿರ್ಧರಿಸುತ್ತದೆ. ಹುಬ್ಬಳ್ಳಿಯಲ್ಲಿ ಅಷ್ಟೊಂದು ಜನರ ಮೇಲೆ ಕೇಸ್ ಹಾಕುವ ಅಗತ್ಯವಿಲ್ಲ. ಹಾಗೆಂದು ಸಂಪುಟ ಉಪಸಮಿತಿ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ. ಬಳಿಕ ಸಂಪುಟ ಸಭೆಯಲ್ಲಿ ಕೇಸ್ ವಾಪಸ್ ಪಡೆಯುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪರಮೇಶ್ವರ ಹೇಳಿದರು.
ಕೋರ್ಟ್ ಒಪ್ಪಿಕೊಂಡರೆ ಆ ಕೇಸ್ಗಳು ವಾಪಸ್ ಆಗುತ್ತವೆ. ಬಿಜೆಪಿ ಅವಧಿಯಲ್ಲೂ ಹಲವು ಕೇಸ್ಗಳನ್ನು ವಾಪಸ್ ಪಡೆಯಲಾಗಿತ್ತು. ಉತ್ತರ ಪ್ರದೇಶದಲ್ಲಿ ಅಲ್ಲಿನ ಸಿಎಂ ವಿರುದ್ಧವೇ ಹಲವು ಪ್ರಕರಣಗಳಿದ್ದವು. ಆ ಕೇಸ್ಗಳನ್ನು ಅವರೇ ವಾಪಸ್ ಪಡೆದುಕೊಂಡಿದ್ದರು. ಹುಬ್ಬಳ್ಳಿ ಕೇಸ್ ವಾಪಸ್ಗೆ ಕೋರ್ಟ್ ಒಪ್ಪುತ್ತದೆಯೋ ಇಲ್ಲವೋ ಗೊತ್ತಿಲ್ಲ. ನಿಯಮಾನುಸಾರ ಕೇಸ್ ವಾಪಸ್ ಪಡೆಯಬಹುದು. 56 ಕೇಸ್ಗಳಲ್ಲಿ 43 ಕೇಸ್ಗಳ ಹಿಂಪಡೆಯಲು ತೀರ್ಮಾನ ಆಗಿದೆ. 43 ಕೇಸ್ ಸಹ ಅಲ್ಪಸಂಖ್ಯಾತರದ್ದಲ್ಲ, ಅದರಲ್ಲಿ ಎಲ್ಲರೂ ಸೇರಿದ್ದಾರೆ. ಬಿಜೆಪಿ ಎಲ್ಲವನ್ನೂ ರಾಜಕೀಯ ಮಾಡುತ್ತಿದೆ ಎಂದು ಪರಮೇಶ್ವರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.