ಮಂಡ್ಯದ ನಾಗಮಂಗಲದ ಬದರಿಕೊಪ್ಪಲಿನಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಅನ್ಯಕೋಮಿನ ಯುವಕರು ಕಲ್ಲು ತೂರಾಟ ಮಾಡಿದ ಆರೋಪ ಕೇಳಿಬಂದಿದ್ದು, ಪೊಲೀಸ್ ಠಾಣೆ ಎದುರು ಗಣಪತಿ ಮೂರ್ತಿ ನಿಲ್ಲಿಸಿ ಹಿಂದೂಗಳು ಪ್ರತಿಭಟನೆ ನಡೆಸಿದ್ದಾರೆ. ನೆನ್ನೆ ಅದ್ದೂರಿಯಾಗಿ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಗುತ್ತಿತ್ತು. ನಾಗಮಂಗಲದ ಮೈಸೂರು ರಸ್ತೆಯಲ್ಲಿರುವ ದರ್ಗಾ ಬಳಿ ಮೆರವಣಿಗೆ ಬಂದ ವೇಳೆ ಅನ್ಯಕೋಮಿನ ಯುವಕರು ಕಲ್ಲುತೂರಾಟ ನಡೆಸಿದ್ದಾರೆ.
ಈ ವೇಳೆ ಹಿಂದೂ-ಮುಸ್ಲಿಂ ಯುವಕರ ನಡುವೆ ವಾಕ್ಸಮರ, ತಳ್ಳಾಟ ನೂಕಾಟವಾಗಿದ್ದು, ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ. ಬಳಿಕ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕಾಗಿ ಆಗ್ರಹಿಸಿ ಪೊಲೀಸ್ ಠಾಣೆ ಎದುರು ಗಣೇಶ ಮೂರ್ತಿ ನಿಲ್ಲಿಸಿ ಹಿಂದೂಗಳು ಪ್ರತಿಭಟನೆ ನಡೆಸಿದ್ದಾರೆ. ಕಳೆದ ವರ್ಷವೂ ಇದೇ ದರ್ಗಾ ಮುಂಭಾಗ ಗಲಾಟೆ ನಡೆದಿತ್ತು. ಮೆರವಣಿಗೆ ವೇಳೆ ದರ್ಗಾ ಮುಂದೆ ತಮಟೆ, ಡೊಳ್ಳು ಬಾರಿಸದಂತೆ ಕಿರಿಕ್ ಆಗಿತ್ತು. ಈ ಬಾರಿ ಕಲ್ಲೆಸೆತ ನಡೆದಿದ್ದು, ನಾಗಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.