ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾನ್ವೆಜ್ ಊಟ ವಿತರಣೆ ಮಾಡಿರುವ ವಿಚಾರ ಇದೀಗ ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಗಿದೆ. ಹೌದು.. ಸಕ್ಕರೆನಾಡು ಮಂಡ್ಯದಲ್ಲಿ ಎರಡು ದಿನಗಳಿಂದ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಬಹಳ ವಿಜೃಂಭಣೆಯಿಂದ ನಡೆಯುತ್ತಿದ್ದು, ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ನೀಡಬೇಕು ಎಂದು ಪ್ರಗತಿಪರರು ವಿಷಯ ಪ್ರಸ್ತಾಪಿಸಿದ್ದರು.
ಆದರೆ ಕಳೆದ ವರ್ಷದಂತೆ ಈ ಬಾರಿ ಕೂಡ ಸಸ್ಯಹಾರವನ್ನು ನೀಡಲಾಗುತ್ತಿತ್ತು. ಆದರೆ ಕೊನೆಯ ದಿನವಾದ ಇಂದು ಮಂಡ್ಯ ಸಮ್ಮೇಳನದಲ್ಲಿ ಬಾಡೂಟ ಹಂಚಿಕೆ ಮಾಡಲಾಗಿದ್ದು, ಅದರ ವಿಡಿಯೋ ಸಖತ್ ವೈರಲ್ ಆಗಿದೆ.
87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಹಾರ ವಿತರಣೆಗಾಗಿ ಜಟಾಪಟಿ ಉಂಟಾಗಿದ್ದು, ಪ್ರಗತಿಪರರು ಮೊಟ್ಟೆ, ಚಿಕನ್ ಕಬಾಬ್, ಕೋಳಿ ಸಾಂಬಾರ್, ರಾಗಿ ಮುದ್ದೆ ಊಟ ಹಂಚಿದ್ದಾರೆ. ಈ ಕುರಿತ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಮಧ್ಯೆ ಪೊಲೀಸರು ಮತ್ತು ಪ್ರಗತಿಪರರ ನಡುವೆ ವಾಗ್ವಾದ ಉಂಟಾಗಿದೆ. ಮಾಂಸಾಹಾರ ವಿತರಣೆ ವೇಳೆ ನೂಕು ನುಗ್ಗಲು ಉಂಟಾಗಿ ತೀವ್ರವಾಗಿ ಗಲಾಟೆ ನಡೆದಿದೆ. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸ್ ಸಿಬ್ಬಂದಿ ಕೊನೆಗೂ ಮಾಂಸಾಹಾರ ವಶಕ್ಕೆ ಪಡೆದಿದ್ದಾರೆ.