ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ನೀರು ಪೂರೈಸುವ ಕಾವೇರಿ 5ನೇ ಹಂತದ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಚಾಲನೆ ನೀಡಿದರು.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಟಿ.ಕೆ.ಹಳ್ಳಿಯ ಬೆಂಗಳೂರು ಜಲಮಂಡಳಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ ಜಂಟಿಯಾಗಿ ಲೋಕಾರ್ಪಣೆಗೊಳಿಸಿದರು. ಯೋಜನೆಯನ್ನು ಲೋಕಾರ್ಪಣೆಗೊಳಿಸುವುದಕ್ಕೂ ಮುನ್ನ ಚಂಡಿಕಾ ಹೋಮ, ಗಣಪತಿ ಪೂಜೆ, ಯಜಮಾನ ಸಂಕಲ್ಪ, ಮಹಾ ಸುದರ್ಶನ ಚಕ್ರ ಪೂಜೆ, ಸುದರ್ಶನ ಹೋಮ, ಮಹಾಚಂಡಿ ಕಳಾಸರಾಧನೆ, ಮಹಮಂಗಳಾರತಿ ನೆರವೇರಿಸಲಾಯಿತು.
ಮಹಾಸಂಕಲ್ಪ, ಚಂಡಿ ನವ ಬ್ರಹ್ಮ ಪೂಜೆ, ದುರ್ಗಾ ಸಪ್ತ ಸತಿ ನಾರಾಯಾಣ ಸೇರಿದಂತೆ 13 ಅಧ್ಯಾಯ, ಗಂಗಾ, ಯಮುನಾ, ಸರಸ್ವತಿ, ನರ್ಮದಾ, ಸಿಂಧು, ಕಾವೇರಿ ಮೊದಲಾದ ಸಪ್ತ ನದಿಗಳ ಕಳಸ ಸ್ಥಾಪನೆ ಮಾಡಿ ಪೂಜೆ ಸಲ್ಲಿಸಲಾಯಿತು. ಮಹಾ ಪೂರ್ಣಾವತಿ, ಮಂಗಳ ದ್ರವ್ಯ ಸಮರ್ಪಣೆ ಮಹಾ ಮಂಗಳಾರತಿ ಸೇರಿ ಹೋಮ-ಹವನ ನೆರವೇರಿಸಲಾಯಿತು. ಶೈವಾಗಮ ವಿಶಾರಾಧ ಜ್ಞಾನ ಸ್ಕಂದ ದೀಕ್ಷಿತರ ನೇತೃತ್ವದಲ್ಲಿ ಪೂಜಾ ಕೈಂಕಾರ್ಯ ನಡೆಯಿತು. ಡಿಸಿಎಂ ಡಿ.ಕೆ ಶಿವಕುಮಾರ್ ಪೂಜಾ ಕೈಂಕಾರ್ಯ ನೆರವೇರಿಸಿದರು. ಡಿಕೆಶಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸಾಥ್ ನೀಡಿದರು. ಇದೇ ವೇಳೆ ಜಾನಪದ ಕಲಾ ತಂಡಗಳ ಮೆರವಣಿಗೆಯೂ ನಡೆಯಿತು.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ 110 ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆ ಇದಾಗಿದೆ. 50 ಲಕ್ಷ ಫಲಾನುಭವಿಗಳಿಗೆ 4 ಲಕ್ಷ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆ ಹೊಂದಿದೆ. ಸುಮಾರು 4,336 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿದ್ದು, 775 ಎಂ.ಎಲ್.ಡಿ ಹೆಚ್ಚುವರಿ ನೀರು ಸರಬರಾಜು ಮಾಡುವ ಗುರಿ ಹೊಂದಿದೆ. ಇದರಿಂದ ಯಲಹಂಕ, ಯಶವಂತಪುರ, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ, ಬೊಮ್ಮನಹಳ್ಳಿ ವಲಯದ ಮನೆ-ಮನೆಗೂ ಕಾವೇರಿ ನೀರು ಪೂರೈಕೆಯಾಹಲಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.