ಮಂಡ್ಯ ಜಿಲ್ಲೆಯಲ್ಲಿ ಹನುಮ ಸಂಕೀರ್ತನಾ ಯಾತ್ರೆ ತೆರಳುತ್ತಿದ್ದ ಸಂದರ್ಭದಲ್ಲಿ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಬಳಿ ಭಾರೀ ಹೈಡ್ರಾಮಾವೇ ನಡೆದಿದೆ. ಇದೀಗ ಸ್ಥಳದಲ್ಲಿ ಬಿಗುವಿನ ವಾತಾವರಣ ಇರುವುದಾಗಿ ಹೇಳಲಾಗ್ತಿದೆ.
ಶ್ರೀರಂಗಪಟ್ಟಣದ ನಿಮಿಷಾಂಬಾ ದೇವಸ್ಥಾನದಿಂದ ಆರಂಭವಾದ ಸಂಕೀರ್ತನಾ ಯಾತ್ರೆ ಜಾಮಿಯಾ ಮಸೀದಿ ಮುಂಭಾಗದಿಂದ ಸಾಗಿ ರಂಗನಾಥಸ್ವಾಮಿ ದೇವಸ್ಥಾನದವರೆಗೆ ಸಾಗಲಿದೆ. ಜಾಮಿಯಾ ಮಸೀದಿ ಬಳಿ ಸಂಕೀರ್ತನಾ ಯಾತ್ರೆ ಬಂದು ತಲುಪುತ್ತಿದ್ದಂತೆ ಯಾತ್ರೆಯಲ್ಲಿ ಭಾಗಿಯಾಗಿರುವ ಹನುಮ ಭಕ್ತರು ಮಸೀದಿ ಬಳಿ ಜಮಾವಣೆಗೊಂಡಿದ್ದಾರೆ. ಮಸೀದಿ ಬಳಿ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ಹನುಮ ಮಾಲಾಧಾರಿಗಳನ್ನು ತಡೆದಿದ್ದಾರೆ. ಪೊಲೀಸರು ಹಾಗೂ ಹನುಮ ಮಾಲಾಧಾರಿಗಳ ನಡುವೆ ನೂಕಟ ತಳ್ಳಾಟ ನಡೆದಿದ್ದು, ಸ್ಥಳದಲ್ಲಿ ಹೈಡ್ರಾಮಾ ನಡೆದಿದೆ.
ಹನುಮ ಮಾಲಾಧಾರಿಗಳಿಗೆ ಸಂಕೀರ್ತನಾ ಯಾತ್ರೆಯಲ್ಲಿ ಮುಂದೆ ಸಾಗುವಂತೆ ಸೂಚಿಸಿದರೂ ಮಸೀದಿ ಬಳಿ ಬಂದು ನಿಂತಿರುವುದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.