ಕಾಂಗ್ರೆಸ್ ಸರ್ಕಾರಕ್ಕೆ ನಾನೇ ಪ್ರಮುಖ ಟಾರ್ಗೆಟ್ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಹೇಳಿದರು. ಮಂಡ್ಯ ಜಿಲ್ಲೆಯ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಮಂಡ್ಯ ಟೂ ಇಂಡಿಯಾ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ನನ್ನ ಮೇಲೆ ತನಿಖೆ ನಡೆಸುತ್ತಿರುವುದು ಯಾವ ಉದ್ದೇಶಕ್ಕೆ? ನನ್ನ ಮೇಲೆ ಮೊನ್ನೆ ಯಾವ ಆಧಾರದ ಮೇಲೆ ಕಂಪ್ಲೇಟ್ ಕೊಟ್ಟಿದ್ದೀರಾ? ಮೊನ್ನೆ ಯಾವುದೋ ಒಂದು ಎನ್ಸಿಆರ್ ಹಾಕಿದ್ದಾರೆ. ಎಫ್ಐಆರ್ ಮಾಡಿಸಲೆಬೇಕೆಂದು ಸಿಎಂ ಮನೆಗೆ ಅಧಿಕಾರಿಗಳನ್ನು ಕರೆಸಿಕೊಂಡಿದ್ದಾರೆ. ಏನೇನೂ ಚರ್ಚೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಪ್ರಮುಖ ಟಾರ್ಗೆಟ್ ಎಂದರೆ ನಾನೇ. ಆದರೆ ನಾನು ನ್ಯಾಯಬದ್ಧವಾಗಿ ನ್ಯಾಯಾಲಯಕ್ಕೆ ಬಿಟ್ಟಿದ್ದೇನೆ ಎಂದು ಹೇಳಿದರು.
ಕೇಂದ್ರ ಸರ್ಕಾರಕ್ಕೆ ಇಡಿ, ಎಸ್ಐಟಿ ಅಸ್ತ್ರ ಎಂದು ಹೇಳುತ್ತಾರೆ. ಸಿಎಂ ಮತ್ತು ಡಿಕೆಶಿಗೆ ಇನ್ವೇಸ್ಟಿಕೇಶನ್ ಟೀಮ್ಗಳಾಗಿವೆ. ಇವರ ಪ್ರಕಾರ ಎಸ್ಐಟಿ ಎಂದರೆ ಅಸ್ತ್ರಗಳು ಎಂದರ್ಥ. ದೆಹಲಿಯಿಂದ ವಕೀಲರನ್ನು ಕರೆಸಿದ್ದಾರೆ. ಪರ ವಿರೋಧ ವಾದಗಳಾಗಿವೆ. ಅದರ ಆಧಾರದ ಮೇಲೆ ಕೋರ್ಟ್ ಯಾವ ರೀತಿ ತನಿಖೆ ಆಗಬೇಕೆಂದು ಹೇಳಿದ್ದು, ನ್ಯಾಯಯುತ ತನಿಖೆ ಆಗಬೇಕಿದೆ. ಲೋಕಾಯುಕ್ತದಲ್ಲಿ ನಿಮ್ಮ ಅಧಿಕಾರಿಗಳಿಂದ ತನಿಖೆ ಮಾಡಲು ಸಾಧ್ಯನಾ? ನಿಮ್ಮಂತ ನಡವಳಿಕೆ ಇರುವ ಸರ್ಕಾರದಲ್ಲಿ ಸತ್ಯಾಂಶ ಹೊರಬರಲ್ಲ. ಈಗ ಇಡಿ ಬಂದಿದೆ ಮುಂದೆ ಏನು ಆಗುತ್ತದೆ ಎಂಬುವುದನ್ನು ನೋಡೋಣ ಎಂದರು.
ಇಡಿ ಅಧಿಕಾರಿಗಳು ಮುಡಾ ಕಚೇರಿ ಹಾಗೂ ತಹಸೀಲ್ದಾರ್ ಕಚೇರಿ ಮೇಲೆ ದಾಳಿ ನಡೆಸಿರುವ ಕುರಿತು ಮಾತನಾಡಿದ ಅವರು, ಮುಡಾ ಹಗರಣ ಅತ್ಯಂತ ಕೆಟ್ಟ ರೀತಿಯಲ್ಲಿ ಆಗಿದೆ. ಸರ್ಕಾರದ ಭೂಮಿಯನ್ನು ಕಬಳಿಸಿದ್ದಾರೆ ಆದಕಾರಣ ಸೈಟ್ಅನ್ನು ವಾಪಸ್ಸು ಕೊಟ್ಟಿರಬಹುದು. ಕಾನೂನು ಬದ್ಧವಾಗಿ ಸೈಟ್ ಪಡೆದಿದ್ದರೆ ಯಾಕೆ ವಾಪಸ್ಸು ಕೊಟ್ಟಿದ್ದೀರಾ? ಸೈಟ್ ಹಂಚಿಕೆಯಲ್ಲಿ ತಪ್ಪು ಮಾಡಿದ್ದೀರಿ ಅದಕ್ಕೆ ವಾಪಸ್ ಕೊಟ್ಟಿದ್ದೀರಿ. ನಿಮ್ಮ ಲೋಕಾಯುಕ್ತ ಅಧಿಕಾರಿಗಳಿಂದ ಸರಿಯಾಗಿ ತನಿಖೆ ಆಗಿಲ್ಲ ಎಂದು ಕಿಡಿಕಾರಿದರು.