ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಒಟ್ಟು 44 ಆರೋಪಿಗಳ ಪೈಕಿ ಮೂವರು ಸಾವನ್ನಪ್ಪಿದರು. ಜೊತೆಗೆ ಓರ್ವ ಪತ್ರಕರ್ತ ನವೀನ್ ಸೂರಿಂಜೆ ಪ್ರಕರಣವನ್ನು ನ್ಯಾಯಾಲಯ ಈ ಹಿಂದೆಯೇ ಕೈಬಿಟ್ಟಿತ್ತು. ಇಂದು ಸಾಕ್ಷ್ಯಾಧಾರಗಳ ಕೊರತೆಯಿಂದ ಉಳಿದ 40 ಆರೋಪಿಗಳನ್ನ ದೋಷ ಮುಕ್ತಗೊಳಿಸಿ ನ್ಯಾಯಾಧೀಶ ಕಾಂತರಾಜು ಅವರು ಆದೇಶ ಹೊರಡಿಸಿದ್ದಾರೆ.
12 ವರ್ಷಗಳ ಬಳಿಕ ಮಂಗಳೂರು ಕೋರ್ಟ್ನಿಂದ ಅಂತಿಮ ತೀರ್ಪು:
2012ರ ಜುಲೈ 28ರಂದು ಮಂಗಳೂರಿನ ಪಡೀಲ್ ಬಳಿಯ ಮಾರ್ನಿಂಗ್ ಮಿಸ್ಟ್ ಹೋಂಸ್ಟೇಯಲ್ಲಿ ಬರ್ತ್ಡೇ ಪಾರ್ಟಿಯಲ್ಲಿ ನಿರತರಾಗಿದ್ದ ಯುವಕ-ಯುವತಿಯರ ಮೇಲೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿದ್ದರು. ಈ ವೇಳೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು 44 ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ಸಂಬಂಧ ಇಬ್ಬರು ಪತ್ರಕರ್ತರನ್ನೂ ಬಂಧಿಸಲಾಗಿತ್ತು. ಇದರಲ್ಲಿ ಓರ್ವ ಪತ್ರಕರ್ತನ ಕೇಸ್ ಸಿದ್ದರಾಮಯ್ಯ ಸರ್ಕಾರ ವಾಪಾಸ್ ಪಡೆದಿತ್ತು. ಹೀಗಾಗಿ ಮಂಗಳೂರು ಕೋರ್ಟ್ 2018ರಲ್ಲಿ ಪತ್ರಕರ್ತನನ್ನು ಕೇಸ್ನಿಂದ ಖುಲಾಸೆ ಮಾಡಿತ್ತು.
ಪ್ರಕರಣ ಸಂಬಂಧ ಅಂದು ರಾಜ್ಯ ಮಹಿಳಾ ಆಯೋಗದಿಂದಲೂ ತನಿಖೆ ನಡೆಸಿ ಅಂದಿನ ಗೃಹ ಸಚಿವ ಆರ್.ಅಶೋಕ್ಗೆ ವರದಿ ಸಲ್ಲಿಸಿದ್ದರು. ಪೊಲೀಸ್ ವೈಫಲ್ಯ ಹಾಗೂ ದಾಳಿಯ ಬಗ್ಗೆ ಡಿಐಜಿ ಗ್ರೇಡ್ ಅಧಿಕಾರಿ ತನಿಖೆಗೆ ಆಯೋಗ ಶಿಫಾರಸ್ಸು ಮಾಡಿದ್ದರು. ಇನ್ನು ಮದ್ಯ ಸೇವಿಸಿ ಅಸಭ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹಿಂಜಾವೇ ಮುಖಂಡ ಸುಭಾಷ್ ಪಡೀಲ್ ನೇತೃತ್ವದಲ್ಲಿ ದಾಳಿ ನಡೆಸಿತ್ತು. ದಾಳಿ ನಡೆಸಿ ಯುವತಿಯರ ಮೇಲೂ ಕಾರ್ಯಕರ್ತರು ಯದ್ವಾತದ್ವಾ ಹಲ್ಲೆ ನಡೆಸಿದ್ದರು. 5 ಹುಡುಗಿಯರು ಸೇರಿದಂತೆ ಪಾರ್ಟಿಯಲ್ಲಿದ್ದ 12 ಜನರನ್ನು ವಿವಸ್ತ್ರಗೊಳಿಸಿ ಥಳಿಸಿದ ಆರೋಪ ಕೇಳಿಬಂದಿತ್ತು.