ಮಂಗಳೂರು ರನ್ನರ್ಸ್ ಕ್ಲಬ್ ವತಿಯಿಂದ ನವೆಂಬರ್ 10ರಂದು ನೀವಿಯಸ್ ಮಂಗಳೂರು ಮ್ಯಾರಾಥಾನ್ ಓಟ ಆಯೋಜಿಸಿದ್ದು, ಇದರಲ್ಲಿ 5000ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿರುವುದರಿಂದ ಮುಂಜಾನೆ 4ರಿಂದ ಬೆಳಿಗ್ಗೆ 10ರ ತನಕ ಮಂಗಳೂರು ನಗರ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಭಾಗವಹಿಸುವ ಈ ಮ್ಯಾರಥಾನ್ ಓಟಕ್ಕೆ ಸಾರ್ವಜನಿಕರೆಲ್ಲರೂ ಸಹಕರಿಸಬೇಕು ಎಂದು ಮಂಗಳೂರು ನಗರ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಓಟ ಮಂಗಳಾ ಕ್ರೀಡಾಂಗಣದಿಂದ ಹೊರಟು ನಾರಾಯಣ ಗುರು ವೃತ್ತ (ಲೇಡಿಹಿಲ್), ಚಿಲಿಂಬಿ, ಉರ್ವಸ್ಟೋರ್, ಕೊಟ್ಟಾರ ಚೌಕಿ, ಕೋಡಿಕಲ್ ಕ್ರಾಸ್, ಕೂಳೂರು, ಕೆಐಒಸಿಎಲ್ ಜಂಕ್ಷನ್ ಮೂಲಕ ಎನ್ಎಂಪಿಎ ಸರ್ವಿಸ್ ರಸ್ತೆಯಲ್ಲಿ ಸಾಗಿ ಡಿಕ್ಸಿ ಕ್ರಾಸ್ನಲ್ಲಿ ಪಣಂಬೂರು ಬೀಚ್ ರಸ್ತೆಗೆ ತಿರುಗಿ ವಾಪಸ್ ಡಿಕ್ಸಿ ಕ್ರಾಸ್, ಕೆಐಓಸಿಎಲ್ ಜಂಕ್ಷನ್ಗೆ ಬಂದು ತಣ್ಣೀರುಬಾವಿ ಬೀಚ್ವರೆಗೆ ಹೋಗಿ ವಾಪಸ್ ಕೊಟ್ಟಾರಚೌಕಿ, ಲೇಡಿಹಿಲ್ ಮೂಲಕ ಮಂಗಳಾ ಕ್ರೀಡಾಂಗಣದಲ್ಲಿಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ವಾಹನ ಸಂಚಾರ, ನಿಲುಗಡೆ ನಿಷೇಧ ಮಾಡಿ, ಸಂಚಾರದಲ್ಲಿ ಮಾರ್ಪಾಡು ಮಾಡಲಾಗಿದೆ.