ಕಾಂಗ್ರೆಸ್ ಸಂಸದ, ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಆರೋಪಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಡಾ. ವೈ ಭರತ್ ಶೆಟ್ಟಿ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಪಾಲಿಕೆ ಸದಸ್ಯ ಕಾಂಗ್ರೆಸ್ನ ಅನಿಲ್ ಕುಮಾರ್ ನೀಡಿದ್ದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಮಂಗಳೂರಿನ ಕಾವೂರಿನಲ್ಲಿ ನಡೆದಿದ್ದ ಬಿಜೆಪಿ ಪ್ರತಿಭಟನೆಯಲ್ಲಿ ಮಾತನಾಡಿದ್ದ ಭರತ್ ಶೆಟ್ಟಿ, ರಾಹುಲ್ ಗಾಂಧಿಗೆ ಪಾರ್ಲಿಮೆಂಟ್ ಒಳಗೆ ಹೋಗಿ ಕೆನ್ನೆಗೆ ಬಾರಿಸಬೇಕಿತ್ತು ಅನಿಸುತ್ತಿದೆ ಎಂದಿದ್ದರು. ರಾಹುಲ್ ಗಾಂಧಿ ಶಿವನ ಫೋಟೊ ಹಿಡಿದು ನಿಂತಿದ್ದ. ಈ ಹುಚ್ಚನಿಗೆ ಶಿವ ಮೂರನೇ ಕಣ್ಣು ಬಿಟ್ಟರೆ ಸುಟ್ಟು ಬೂದಿಯಾಗಬಹುದು ಅಂತ ಗೊತ್ತಿಲ್ಲ ಎಂದು ಭರತ್ ಶೆಟ್ಟಿ ಹೇಳಿದ್ದರು. ಭರತ್ ಶೆಟ್ಟಿ ಈ ಹೇಳಿಕೆ ವಿರುದ್ಧ ಕಾವೂರು ಪಾಲಿಕೆ ಸದಸ್ಯ ದೂರು ನೀಡಿದ್ದ ಹಿನ್ನೆಲೆ BNS 351(3), 353 ಸೆಕ್ಷನ್ ಅಡಿ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.