ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವ ಹಿನ್ನೆಲೆ ಇಂದು ರಾಯರ ಉತ್ತರಾರಾಧನೆ ಸಂಭ್ರಮ ಮನೆ ಮಾಡಿದೆ. ಬೆಳಿಗ್ಗೆಯಿಂದ ವಿಶೇಷ ಪೂಜಾ ಕೈಂಕರ್ಯಗಳು ನಿರಂತರವಾಗಿ ಸಾಗಿವೆ. ಇಂದು ಮಠದ ಅಂಗಳದಲ್ಲಿ ಮಹಾರಥೋತ್ಸವ ನಡೆಯಲಿದೆ.
ಆರಾಧನಾ ಮಹೋತ್ಸವದ ಕೊನೆಯ ಘಟ್ಟ ಈಗ ತಲುಪಿದ್ದು ರಾಯರು ವೃಂದಾವನಸ್ಥರಾದ ಮರುದಿನವನ್ನ ಉತ್ತರರಾಧನೆಯಾಗಿ ಆಚರಣೆ ಮಾಡಲಾಗಿತ್ತಿದೆ. ಮಠದ ರಾಜಬೀದಿಯಲ್ಲಿ ಮಹಾರಥೋತ್ಸವ ಜರುಗಲಿದ್ದು, ಅಂತಿಮ ಸಿದ್ದತೆಗಳು ನಡೆದಿವೆ. ಮಹಾರಥೋತ್ಸವಕ್ಕೂ ಮುನ್ನ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಮಠದ ಎಲ್ಲಾ ವೃಂದಾವನಗಳಿಗೆ ಗುಲಾಲ್ ಎರಚುವ ಮೂಲಕ ವಸಂತೋತ್ಸವ ಆಚರಿಸುತ್ತಾರೆ. ಬಳಿಕ ಉತ್ಸವ ಮೂರ್ತಿ ಪ್ರಹ್ಲಾದ ರಾಜರ ಮೆರವಣಿಗೆ ನಡೆಯುತ್ತದೆ. ಮೆರವಣಿಗೆ ಬಳಿಕ ಮಹಾರಥೋತ್ಸವ ನಡೆಯಲಿದೆ. ರಥಕ್ಕೆ ಹೆಲಿಕಾಪ್ಟರ್ ಮೂಲಕ ಪುಷ್ಟಿವೃಷ್ಠಿ ಮಾಡಲಾಗುತ್ತದೆ.