ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಕೆರೆಯಂತಾಗಿದ್ದ ಭಾರತದ ಪ್ರಮುಖ ಟೆಕ್ ಹಬ್ ಎನಿಸಿಕೊಂಡಿರುವ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಇದೀಗ ಭೂ ಕುಸಿತ ಭೀತಿ ಆವರಿಸಿದೆ. ಹೌದು.. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಭಾರತದ ಪ್ರಮುಖ ಟೆಕ್ ಹಬ್ ಎನಿಸಿಕೊಂಡಿರುವ ಮಾನ್ಯತಾ ಟೆಕ್ ಪಾರ್ಕ್ ಪ್ರವಾಹಪೀಡಿತ ಪ್ರದೇಶದಂತಾಗಿದೆ.
ಸುಮಾರು 300 ಎಕರೆ ಪ್ರದೇಶದರಲ್ಲಿರುವ ಟೆಕ್ ಪಾರ್ಕ್ ಮಳೆನೀರಿನಿಂದ ತುಂಬಿಕೊಂಡಿದ್ದು, ರಸ್ತೆ ತುಂಬಾ ನೀರು ತುಂಬಿಕೊಂಡು ವಾಹನಗಳು ಅದರಲ್ಲಿ ಸಿಲುಕಿ ಸಂಚಾರಕ್ಕೆ ಸವಾರರು ಪರದಾಡುವಂತಾಗಿದೆ. ಮಾನ್ಯತಾ ಟೆಕ್ ಪಾರ್ಕ್ ರಸ್ತೆ ಜಲಾವೃತಗೊಂಡಿದ್ದು, ಮಾನ್ಯತಾ ಟೆಕ್ ಪಾರ್ಕ್ ಆವರಣದ ಮುಂಭಾಗದಲ್ಲಿರುವ ನಿರ್ಮಾಣ ಹಂತದ ಬಹುಮಹಡಿ ಕಟ್ಟಡದಲ್ಲಿ ಮಣ್ಣು ಕುಸಿತ ಸಂಭವಿಸಿದೆ.
ಪರಿಣಾಮವಾಗಿ ಬೃಹತ್ ಮರವೊಂದು ಆವರಣದ ಒಳಗೆ ಬಿದ್ದಿದೆ. ಅಲ್ಲದೆ, ಮಳೆ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಇಲ್ಲವಾಗಿದೆ. ಇದರಿಂದಾಗಿ ಮಾನ್ಯತಾ ಟೆಕ್ ಪಾರ್ಕ್ ಅಕ್ಷರಶಃ ಕೆರೆಯಂತಾಗಿದ್ದು, ಮಂಗಳವಾರ ನಾಲ್ಕೈದು ಅಡಿ ಎತ್ತರಕ್ಕೆ ನೀರು ನಿಂತುಕೊಂಡಿತ್ತು. ಅಲ್ಲದೆ ಇಲ್ಲಿ ಕೃತಕ ಜಲಪಾತ ಕೂಡ ಸೃಷ್ಟಿಯಾಗಿತ್ತು. ಇದೀಗ ಇದೇ ಮಳೆ ನೀರು ಪ್ರವಾಹದಿಂದಾಗಿ ಇಲ್ಲಿನ ಮಣ್ಣು ಸಡಿಲಗೊಂಡು, ಬೃಹತ್ ಮರ ಮತ್ತು ತಾತ್ಕಾಲಿಕ ಶೆಡ್ ಕುಸಿಯುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಅದೃಷ್ಟವಶಾತ್ ಇಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಹೇಳಲಾಗಿದೆ.